ದೇಶ

ಪಿಡಿಪಿ ಜತೆ ಡೀಲ್ ಮಾಡಿಲ್ಲ, ಕಾನೂನು ರೀತಿ ಬಿಡುಗಡೆಯಾಗಿದ್ದೇನೆ: ಆಲಂ

Lingaraj Badiger

ಶ್ರೀನಗರ: ಆಡಳಿತರೂಢ ಪಿಡಿಪಿಯೊಂದಿಗೆ ನಾನು ಯಾವುದೇ ಡೀಲ್ ಮಾಡಿಕೊಂಡಿಲ್ಲ, ಕಾನೂನು ಪ್ರಕಾರವೇ ಜೈಲಿನಿಂದ ಬಿಡುಗಡೆಯಾಗಿದ್ದೇನೆ ಎಂದು 120 ಮಂದಿ ಸಾವಿಗೆ ಕಾರಣವಾಗಿದ್ದ ಮುಸ್ಲಿಂ ಲೀಗ್ ಹಾಗೂ ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡ ಮಸಾರತ್ ಆಲಂ ಹೇಳಿದ್ದಾರೆ.

'ನನ್ನ ಬಿಡುಗಡೆಗೆ ಸರ್ಕಾರ ಅಥವಾ ಪಿಡಿಪಿ ಜತೆಗಿನ ಒಪ್ಪಂದ ಕಾರಣವಲ್ಲ' ಎಂದು 44 ವರ್ಷದ ಮಸಾರತ್ ಆಲಂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಇನ್ನು ಬರಾಮುಲ್ಲಾ ಜೈಲಿನಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯೊಬ್ಬರು ತಮ್ಮನ್ನು ಭೇಟಿ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಮಸಾರತ್, ನಾನು ಸರ್ಕಾರ ಅಥವಾ ಯಾವುದೇ ಪ್ರತಿನಿಧಿಯೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ಪ್ರಕಾರ, ಈ ಹಿಂದಿನ ಒಮರ್ ಅಬ್ದುಲ್ಲಾ ಸರ್ಕಾರ ನನ್ನ ವಿರುದ್ಧ ಸಾರ್ವಜನಿಕ ರಕ್ಷಣಾ ಕಾಯ್ದೆ(ಪಿಎಸ್‌ಎ) ಅಡಿ ದಾಖಲಿಸಿದ್ದ ಪ್ರಕರಣವನ್ನು ಕೋರ್ಟ್ ರದ್ದುಗೊಳಿಸಿದೆ ಮತ್ತು ಈ ಪ್ರಕರಣದಲ್ಲಿ ಜಾಮೀನು ದೊರೆತಿದ್ದು, ಕಾನೂನು ಪ್ರಕಾರವೇ ನಾನು ಜೈಲಿನಿಂದ ಬಿಡುಗಡೆಯಾಗಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಶನಿವಾರ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಮಸಾರತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು.

ಸಯೀದ್ ಅವರ ಈ ಕ್ರಮಕ್ಕೆ ಮಿತ್ರ ಪಕ್ಷ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಸಾರತ್ ಬಿಡುಗಡೆ ಪ್ರಕರಣ ನಿನ್ನೆ ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತ್ತು. ಈ ಕುರಿತು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಏನು ನಡೆಯುತ್ತಿದೆಯೇ ಆ ಬಗ್ಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಲ್ಲ ಮತ್ತು ಮಾಹಿತಿ ನೀಡಿಯೂ ಇಲ್ಲ ಎಂದು ಹೇಳಿದ್ದರು.

SCROLL FOR NEXT