ನವದೆಹಲಿ: ಪಕ್ಷದ ನಾಯಕರಾದ ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲು ಬಯಸಿದ್ದರು ಎಂದು ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಮನಿಶ್ ಸಿಸೋಡಿಯಾ, ಗೋಪೈ ರೈ, ಪಂಕಜ್ ಗುಪ್ತ ಹಾಗೂ ಸಂಜಯ್ ಸಿಂಗ್ ಅವರು ಮಂಗಳವಾರ ಆರೋಪಿಸಿದ್ದಾರೆ.
ಈ ಸಂಬಂಧ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಆಪ್ ನಾಯಕರು, ಮಾರ್ಚ್ 4ರಂದು ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ, ಭೂಷಣ್ ಮತ್ತು ಯಾದವ್ ಅವರನ್ನು ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಯಿಂದ ವಜಾಗೊಳಿಸಿದ ಬಗ್ಗೆ ಮತ್ತು ಅವರಿಗೆ ಹೊಸ ಜವಾಬ್ದಾರಿ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
'ನಮ್ಮ ಎಲ್ಲಾ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದರೆ, ಈ ಮೂವರು- ಪ್ರಶಾಂತ್ ಭೂಷಣ್ಸ ಶಾಂತಿ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ಪಕ್ಷವನ್ನು ಸೋಲಿಸಲು ಯತ್ನಿಸುತ್ತಿದ್ದರು' ಎಂದು ಜಂಟಿ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಗೌರವ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಅವರನ್ನು ಪಿಎಸಿಯಿಂದ ಕೈ ಬಿಟ್ಟಿರುವ ಕುರಿತು ಕಾರಣಗಳನ್ನು ಪ್ರಕಟಿಸಿರಲಿಲ್ಲ. ಆದರೆ ಈ ಕುರಿತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿರುವುದರಿಂದ, ನಾವು ಸ್ಪಷ್ಟನೆ ನೀಡುತ್ತಿದ್ದೇವೆ ಎಂದಿದ್ದಾರೆ.