ನವದೆಹಲಿ: ಭಾರತದಲ್ಲಿ ನಿಷೇಧಕ್ಕೊಳಗಾದ `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಸಾಕ್ಷ್ಯಚಿತ್ರವು 2012ರ ಡಿ.16ರ ರಾತ್ರಿ ಏನು ನಡೆದಿತ್ತು ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಉಡ್ವಿನ್ ಹೇಳಿದರೆ, ಇದು `ನಕಲಿ' ಎಂದು ಅಂದು ರಾತ್ರಿ ನಿರ್ಭಯಾಳ ಜತೆಗಿದ್ದ ಆಕೆಯ ಸ್ನೇಹಿತ ಹೇಳಿದ್ದಾನೆ.
ಸಾಕ್ಷ್ಯಚಿತ್ರಕ್ಕೆ ನಿರ್ಬಂಧ ಹೇರಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ನಿರ್ಭಯಾಳ ಗೆಳೆಯ ಅವನೀಂದ್ರ ಪಾಂಡೆ, ಈ ಸಾಕ್ಷ್ಯಚಿತ್ರದಲ್ಲಿ ಬಲಿಪಶುವಿನ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ. ಸತ್ಯಾಂಶವನ್ನು ರಹಸ್ಯವಾಗಿಡಲಾಗಿದೆ, ಕೆಲವು ಅಂಶಗಳಂತೂ ನಕಲಿ ಎಂದಿದ್ದಾನೆ. ಜತೆಗೆ, ನಿರ್ಭಯಾಳ ಟ್ಯೂಟರ್ ಎಂದು ಸತ್ಯೇಂದ್ರ ಎಂಬ ಯುವಕನ ಹೇಳಿಕೆಗಳನ್ನು ಪಡೆಯಲಾಗಿದೆ. ಆದರೆ ಆತನನ್ನು ನಾನೆಂದೂ ನೋಡಿಯೇ ಇಲ್ಲ. ಅಷ್ಟೇ ಅಲ್ಲ, `ಅಂದು ಅವನೀಂದ್ರ ಪಾಂಡೆ ಆ್ಯಕ್ಷನ್ ಸಿನಿಮಾ ನೋಡಬೇಕೆಂದು ಬಯಸಿದ್ದ.
ಆದರೆ ನಿರ್ಭಯಾ ಮಾತ್ರ `ಲೈಫ್ ಆಫ್ ಪೈ' ವೀಕ್ಷಿಸಲು ಒತ್ತಾಯಿಸಿದ್ದಳು' ಎಂದು ಆ ಸತ್ಯೇಂದ್ರ ಹೇಳಿದ್ದಾನೆ. ನಾನು ಯಾವ ಸಿನಿಮಾ ನೋಡಬೇಕೆಂದು ನಿರ್ಧರಿಸಿದ್ದೆ ಎಂಬುದು ಅವನಿಗೆ ಹೇಗೆ ಗೊತ್ತು ಎಂದೂ ಪ್ರಶ್ನಿಸಿದ್ದಾನೆ ಪಾಂಡೆ. ಇದೇ ವೇಳೆ, ಸಾಕ್ಷ್ಯಚಿತ್ರದಲ್ಲಿ ನನ್ನ ಹೇಳಿಕೆ ಪಡೆಯಲು ಉಡ್ವಿನ್ ಮುಂದಾಗಿದ್ದರು. ಆದರೆ ಅದಕ್ಕೆ ನಾನೇ ಒಪ್ಪಲಿಲ್ಲ ಎಂದೂ ಹೇಳಿದ್ದಾನೆ ಪಾಂಡೆ.
ಅಮೆರಿಕದಲ್ಲಿ ಪ್ರದರ್ಶನ
ಏತನ್ಮಧ್ಯೆ, ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರವನ್ನು ಅಮೆರಿಕದಲ್ಲಿ ಮಂಗಳವಾರ ಪ್ರಸಾರ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಆಸ್ಕರ್ ವಿಜೇತ ತಾರೆಯರಾದ ಮೆರಿಲ್ ಸ್ಟ್ರೀಪ್, ಫ್ರೀಡಾ ಪಿಂಟೋ ಮತ್ತು ನಟ-ನಿರ್ದೇಶಕ ಫರ್ಹಾನ್ ಅಖ್ತರ್ ಭಾಗವಹಿಸಿದ್ದರು. ಇದೇ ವೇಳೆ, ಭಾರತದಲ್ಲಿ ಸಾಕ್ಷ್ಯಚಿತ್ರಕ್ಕೆ ಹೇರಿರುವ ನಿಷೇಧ ಹೆಚ್ಚು ದಿನ ಮುಂದುವರಿಯುವುದಿಲ್ಲ. ನಾಗರಿಕ ಮೌಲ್ಯಗಳು ಮತ್ತೆ ಬರಲಿವೆ. ಏಕೆಂದರೆ, ಭಾರತದ ನ್ಯಾಯಾಲಯಗಳೇನೂ ಸರ್ಕಾರದ ಕೈಗೊಂಬೆಗಳಲ್ಲ ಎಂದು ನಿರ್ಮಾಪಕಿ ಉಡ್ವಿನ್ ಹೇಳಿದ್ದಾರೆ.