ದೇಶ

ಜಯಾ ಪ್ರಕರಣ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Mainashree

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಗೊಳಿಸುವಂತೆ ಕೋರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಮೂವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಪ್ರಕರಣದ ಮೂಲ ದೂರುದಾರ ಹಾಗೂ ಬಿಜೆಪಿ ಮುಖಂಡ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಬುಧವಾರ ಬೆಳಗ್ಗೆ 14 ಪುಟಗಳ ಲಿಖಿತ ವಾದ ಸಲ್ಲಿಸಿದರು. ಜಯಲಲಿತಾ ಪರ ವಕೀಲರು ಸ್ವಾಮಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೋರಿದ ಹಿನ್ನೆಲಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

ಮಧ್ಯಾಹ್ನ ಕಲಾಪ ಆರಂಭಗೊಂಡಾಗ ಜಯಲಲಿತಾ ಪರ ವಕೀಲರು ಆರು ಪುಟಗಳ ಆಕ್ಷೇಪಣೆ ಸಲ್ಲಿಸಿದರು. ಅರ್ಜಿ ಸಂಬಂಧ ವಾದ ಪ್ರತಿವಾದ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರಿದ್ದ ವಿಶೇಷ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತು.

41 ದಿನಗಳ ವಿಚಾರಣೆ

ಮೇಲ್ಮನವಿ ವಿಚಾರಣೆ ಜ.5ರಿಂದ ಆರಂಭವಾಗಿ ಮಾ.11ಕ್ಕೆ ಮುಕ್ತಾಯಗೊಂಡಿದೆ. ಒಟ್ಟು 41 ದಿನಗಳ ಕಾಲ ವಿಚಾರಣೆ ನಡೆದಿದ್ದು, ವಿಶೇಷ ನ್ಯಾಯಪೀಠದ ನ್ಯಾ.ಸಿ.ಆರ್.ಕುಮಾಸ್ವಾಮಿ ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.

SCROLL FOR NEXT