ಫೋರ್ಟ್‌ಲೋಯಿಸ್: ಅವಳಿ ತೆರಿಗೆ ವಂಚನೆ ತಡೆ ಒಪ್ಪಂದಕ್ಕೆ ಭಾರತ ಮತ್ತು ಮಾರೀಷಸ್ ರಾಷ್ಟ್ರಗಳು ಸಹಿ ಹಾಕಿವೆ.
ಕಳೆದ ಹಲವಾರು ವರ್ಷಗಳಿಂದ ಮಾರೀಷಸ್ ಮತ್ತು ಭಾರತದ ನಡುವೆ ಅವಳಿ ತೆರಿಗೆ ವಂಚನೆ ತಡೆ ಕುರಿತ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಾರೀಷಸ್ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರು ನಿನ್ನೆ ಮಾರೀಷಸ್ ಪ್ರಧಾನಿ ಸರ್ ಅನ್‌ರೂಡ್ ಜುಗ್ನಾಥ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಅವರು ಸಮ್ಮತಿಸಿದ್ದಾರೆ.
ನೆರೆಯ ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರಮೋದಿಯವರು ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಹಣಕಾಸಿನ ನೆರವು ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾಗರೋತ್ಥಾನ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವಾರು ಮಹತ್ವದ ಒಪ್ಪಂದಗಳಿಗೂ ಉಭಯ ರಾಷ್ಟ್ರಗಳ ಪ್ರಮುಖರು ಸಹಿ ಹಾಕಿದ್ದಾರೆ. ಒಪ್ಪಂದದ ನಂತರ ಉಭಯ ರಾಷ್ಟ್ರಗಳ ಪ್ರಧಾನಿಗಳು ಬಹುದಿನಗಳಿಂದ ಸಾಧ್ಯವಾಗದ ಒಪ್ಪಂದಕ್ಕೆ ಸಹಿ ಹಾಕಿರುವುದು ಸಂತಸ ತಂದಿದೆ. ಈ ಒಪ್ಪಂದದ ನಂತರ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದು ಮಾರೀಷಸ್‌ನಿಂದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.