ದೇಶ

ಪ್ರಧಾನಿ ಮೋದಿಗೆ ಲಂಕಾ ಮಾಜಿ ಸೈನಿಕನಿಂದ ಎಚ್ಚರಿಕೆ..!

Srinivasamurthy VN

ಕೊಲಂಬೋ: 27 ವರ್ಷಗಳ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮೇಲೆ ಹಲ್ಲೆ ನಡೆಸಿದ್ದ ಶ್ರೀಲಂಕಾದ ಮಾಜಿ ಸೈನಿಕ ವಿಜಿಥಾ ರೋಹನ್ ವಿಜೆಮುನಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಆತ ಎಚ್ಚರಿಕೆ ನೀಡಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀಲಂಕಾ ಪ್ರವಾಸದ ಹಿನ್ನಲೆಯಲ್ಲಿ ಮಾತನಾಡಿರುವ ಶ್ರೀಲಂಕಾದ ಮಾಜಿ ಸೈನಿಕ ವಿಜಿಥಾ ರೋಹನ್ ವಿಜೆಮುನಿ, ನರೇಂದ್ರ ಮೋದಿ ಅವರು ಶ್ರೀಲಂಕಾದ ಆಂತರಿಕ ವಿಚಾರಗಳನ್ನು ಕೆದಕುವ ಮೂಲಕ ದೇಶದಲ್ಲಿ ಮತ್ತೆ ಅಶಾಂತಿ ನೆಲೆಸುವಂತೆ ಮಾಡಬಾರದು ಎಂದು ಹೇಳಿದ್ದಾನೆ.

ಖಾಸಗಿ ಇಂಗ್ಲೀಷ್ ವೃತ್ತಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ವಿಜೆಮುನಿ, "ನಾನು ನರೇಂದ್ರ ಮೋದಿಯವರನ್ನು ಗೌರವಿಸುತ್ತೇನೆ. ಏಕೆಂದರೆ ಅವರು ಉತ್ತಮ ವ್ಯಕ್ತಿಯಾಗಿದ್ದು, ಅವರು ನಮ್ಮ ದೇಶಕ್ಕೆ ಬಂದಿರುವುದು ತುಂಬಾ ಸಂತೋಷದ ಸಂಗತಿ. ಆದರೆ ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ನರೇಂದ್ರ ಮೋದಿ ಅವರು ತಲೆಹಾಕುವ ಹಾಕಿಲ್ಲ. ಭಾರತದ ಪ್ರಧಾನಿ ನಮ್ಮ ಕ್ಷೇತ್ರಿಯ ಅಖಂಡತೆಯನ್ನು ಗೌರವಿಸಬೇಕು. ಮೋದಿಯವರು ಸಹ ರಾಜೀವ್ ಗಾಂಧಿಯವರಂತೆ ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ತಮಿಳರ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಲಂಕಾದಲ್ಲಿ ಶಾಂತಿಯನ್ನು ಉಳಿಸುವಂತಹ ಸಂಬಂಧವನ್ನು ಮೋದಿಯವರು ನಮ್ಮ ಜತೆ ಬೆಳೆಸಬೇಕು" ಎಂದು ಮಾಜಿ ಸೈನಿಕ ವಿಜೆಮುನಿ ಹೇಳಿದ್ದಾನೆ.

ಅಂದಿನ ಕಾಲಕ್ಕೆ ಶ್ರೀಲಂಕಾದ ಸೈನಿಕನಾಗಿದ್ದ ವಿಜೆಮುನಿ 1988ರಲ್ಲಿ ಕೊಲಂಬೋದಲ್ಲಿ ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ ಮೇಲೆ ಹಲ್ಲೆ ನಡೆಸಿದ್ದ. ಆ ಕಾರಣಕ್ಕೆ ಆತನನ್ನು ಸೈನ್ಯದಿಂದ ವಜಾಗೊಳಿಸಲಾಗಿತ್ತು. ನಂತರ ಆತ ಜ್ಯೋತಿಷಿಯಾಗಿ ಪ್ರಖ್ಯಾತನಾಗಿದ್ದ.

ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, 2008ರಲ್ಲಿ ಪೂರ್ವ ಪ್ರಧಾನಿ ಮನಮೋಹನ್ ಸಿಂಗ್ ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸಲು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಆದರೆ ಆಗ ದ್ವಿಪಕ್ಷೀಯ ಮಾತುಕತೆ ನಡೆದಿರಲಿಲ್ಲ.

SCROLL FOR NEXT