ಲಾಹೋರ್: ಪೇಶಾವರದಲ್ಲಿ 132 ಮಕ್ಕಳ ಮಾರಣಹೋಮ ನಡೆದ ಬಳಿಕ ಪಾಕಿಸ್ತಾನದ ಜನ ಉಗ್ರರ ವಿರುದ್ಧ ಅಕ್ಷರಶಃ ತಿರುಗಿಬಿದ್ದಿದ್ದಾರೆ. ಕಣ್ಣಲ್ಲಿ ರಕ್ತವೇ ಇಲ್ಲದಂತೆ ವರ್ತಿಸುತ್ತಿರುವ ಉಗ್ರರಿಂದ ಯಚಾರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎನ್ನುವುದು ಪಾಕಿಸ್ತಾನೀಯರ ಅರಿವಿಗೆ ಬಂದಿದೆ. ಇದಕ್ಕೆ ಭಾನುವಾರ ಲಾಹೋರ್‍ನಲ್ಲಿ ನಡೆದ ಘಟನೆಯೇ ಸ್ಪಷ್ಟ ಸಾಕ್ಷಿ.
ಭಾನುವಾರ ಲಾಹೋರ್‍ನಲ್ಲಿ ಚರ್ಚುಗಳ ಮೇಲೆ ತಾಲಿಬಾನ್ ಉಗ್ರರು ಅವಳಿ ಆತ್ಮಾಹುತಿ ದಾಳಿ ನಡೆಸಿದ್ದು, 15 ಮಂದಿ ಸಾವಿಗೀಡಾಗಿದ್ದಾರೆ. ಪ್ರತಿ ಬಾರಿ ಇಂತಹ ಸ್ಫೋಟ ನಡೆದಾಗ `ಗೋಡೆ ಬಿದ್ದರೆ ಜಗಲಿ ಮೇಲೆ' ಎಂದು ಕುಳಿತಿರುತ್ತಿದ್ದ ಜನ ಈ ಬಾರಿ ಸುಮ್ಮನಿರಲಿಲ್ಲ. ಸ್ಫೋಟಕ್ಕೆ 15 ದೇಹಗಳು ಚಿಂದಿ ಚಿಂದಿಯಾಗಿ ಬಿದ್ದಿದ್ದಾಗ, ಗಾಯಾಳುಗಳು ನೋವಿನಿಂದ ಅರಚುತ್ತಿದ್ದಾಗ ಬದುಕುಳಿದವರು ದುಃಖಿಸುತ್ತಾ ಕುಳಿತುಕೊಳ್ಳದೇ ಉಗ್ರರ ವಿರುದ್ಧ ಟೊಂಕ ಕಟ್ಟಿದರು. ಸ್ಫೋಟ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತೇ ಎಂದು ನೋಡಲು ಬಂದಿದ್ದ ಇಬ್ಬರು ಉಗ್ರರನ್ನು ಹಿಡಿದು ಬಾರಿಸತೊಡಗಿದರು. ಅಲ್ಲಿ ಸೇರಿದ್ದ ಸ್ಥಳೀಯರ ಆಕ್ರೋಶ ಎಷ್ಟರಮಟ್ಟಿಗಿತ್ತೆಂದರೆ, ಹಲ್ಲೆ ನಡೆಸಿದ ಬಳಿಕ ಆ ಇಬ್ಬರು ಉಗ್ರರನ್ನೂ ಜೀವಂತವಾಗಿ ಸುಟ್ಟುಹಾಕಿ ತಮ್ಮ ಆವೇಶವನ್ನು ತಣಿಸಿಕೊಂಡರು.
ಒಳಗೆ ಬಿಡದ್ದಕ್ಕೆ ಗೇಟಲ್ಲೇ ಸ್ಫೋಟ ಈ ಎಲ್ಲ ಅಚ್ಚರಿಯ ಬೆಳವಣಿಗೆ ನಡೆದಿದ್ದು ಲಾಹೋರ್‍ನ ಯೂಹಾನಾಬಾದ್‍ನಲ್ಲಿ. ಇಲ್ಲಿನ ರೋಮನ್ ಕ್ಯಾಥೊಲಿಕ್ ಚರ್ಚ್ ಮತ್ತು ಕ್ರೈಸ್ಟ್ ಚರ್ಚ್‍ನಲ್ಲಿ ಭಾನುವಾರ ಬೆಳಗ್ಗೆ ಪ್ರಾರ್ಥನೆಗೆಂದು ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಅಲ್ಲಿಗೆ ಬಂದ ಇಬ್ಬರು ಆತ್ಮಾಹುತಿ ಬಾಂಬರ್‍ಗಳು, ಚರ್ಚುಗಳೊಳಗೆ ಹೋಗಲು ಪ್ರಯತ್ನಿಸಿದರು. ಆದರೆ, ಅಲ್ಲಿನ ಭದ್ರತಾ ಸಿಬ್ಬಂದಿ ಅವರಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಹೀಗಾಗಿ ಬಾಂಬರ್‍ಗಳು ನಿಂತಲ್ಲಿಯೇ (ಚರ್ಚಿನ ಗೇಟಿನ ಮುಂದೆ) ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸ್ಪೋಟದ ತೀವ್ರತೆಗೆ ಭದ್ರತಾ ಸಿಬ್ಬಂದಿ ಮತ್ತು ಉಗ್ರರಿಬ್ಬರ ದೇಹದ ಚೂರುಗಳು ಚಿಂದಿ ಚಿಂದಿಯಾಗಿ ಬಿದ್ದವು. ಜತೆಗೆ, ಚರ್ಚ್‍ನೊಳಗಿದ್ದ 15 ಮಂದಿ ಮೃತಪಟ್ಟು, 68ಕ್ಕೂ ಅಧಿಕ ಮಂದಿ ಗಾಯಗೊಂಡರು ಎಂದೂ ಅವರು ತಿಳಿಸಿದ್ದಾರೆ
ಜನರ ಆಕ್ರೋಶ ಹಿಂಸೆಗೆ ತಿರುಗಿತು
ಘಟನೆಯಿಂದಾಗಿ ಉದ್ರಿಕ್ತರಾದ ಜನರು ಆ ಪ್ರದೇಶದಾದ್ಯಂತ ವ್ಯಾಪಕ ಹಿಂಸಾಚಾರ ನಡೆಸಿದರು. ಕೆಲವು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿಮಾಡಲಾಗಿದೆ. ಅಚ್ಚರಿಯೆಂದರೆ, ಘಟನೆಗೆ ಕಾರಣರೆನ್ನಲಾದ ಇಬ್ಬರು ಶಂಕಿತ ಉಗ್ರರನ್ನು ಹಿಡಿದ ಜನಸಮೂಹ, ಅವರಿಬ್ಬರ ಮೇಲೆ ಹಲ್ಲೆ ನಡೆಸಿ, ಕೊನೆಗೆ ಸಜೀವ ದಹನ ಮಾಡಿತು.
ಇಬ್ಬರ ದೇಹವೂ ಗುರುತಿಸಲಾಗದಷ್ಟು ಸುಟ್ಟುಹೋಗಿದೆ. `ನಾವು ಆತ್ಮಾಹುತಿ ಬಾಂಬರ್‍ಗಳ ಸಹಚರರಾಗಿದ್ದು, ಸ್ಫೋಟ ಕಾರ್ಯದ ಮೇಲೆ ಕಣ್ಣಿಡಲು ಇಲ್ಲಿಗೆ ಬಂದಿದ್ದೆವು' ಎಂದು ಶಂಕಿತರಿಬ್ಬರೂ ಒಪ್ಪಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ವೇಳೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಾರ್ವಜನಿಕರ ರಕ್ಷಣೆಯತ್ತ ಗಮನಹರಿಸುವಂತೆ ಪ್ರಾಂತೀಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಹೊಣೆ ಹೊತ್ತ ಅಹ್ರಾರ್
ತೆಹ್ರೀಕ್-ಇ-ತಾಲಿಬಾನ್‍ನಿಂದ ಹೊರಬಂದ ಜಮಾತ್-ಉಲ್- ಅಹ್ರಾರ್ ಎಂಬ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿದೆ.
ಯೂಹನಾಬಾದ್ ಎನ್ನುವುದು ಪಾಕಿಸ್ತಾನದ ಅತಿದೊಡ್ಡ ಕ್ರಿಶ್ಚಿಯನ್ ಸಮುದಾಯವಿರುವ ಪ್ರದೇಶ. ಇಲ್ಲಿ ಕನಿಷ್ಠ 10 ಲಕ್ಷ ಕ್ರಿಶ್ಚಿಯನ್ನರು ಹಾಗೂ 150 ಚರ್ಚುಗಳಿವೆ. ಹಲವಾರು ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಉಗ್ರರ ದಾಳಿ ನಡೆಯುತ್ತಲೇ ಇವೆ. 2013ರಲ್ಲಿ ಪೇಶಾವರದಲ್ಲಿ ಆಲ್ ಸೈಂಟ್ಸ್ ಚರ್ಚಿನ ಮೇಲೆ ದಾಳಿ ನಡೆಸಿದ್ದ ಉಗ್ರರು, 80 ಮಂದಿಯ ಸಾವಿಗೆ ಕಾರಣರಾಗಿದ್ದರು.