ನವೆದಹಲಿ: ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರದ ವಿವಾದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದ್ದು, ಇಂಡಿಯಾಸ್ ಡಾಟರ್ ನಿರ್ಮಾಪಕಿ ಲೆಸ್ಲಿ ಉಡ್ವಿನ್ ನಿರ್ಭಯ ಗೆಳೆಯನ ಮೇಲೆ ಆರೋಪ ವ್ಯಕ್ತಪಡಿಸುವ ಮೂಲಕ ಇದೀಯ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ದೆಹಲಿ ಸಾಮೂಹಿಕ ಅತ್ಯಾಚಾರ ಕುರಿತ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರ ನಿರ್ಮಾಣದ ವೇಳೆ ಸಂದರ್ಶನ ನೀಡಲು ನಿರ್ಭಯ ಗೆಳೆಯ ಹಣ ಕೇಳಿದ್ದ ಎಂದು ಹೇಳುವ ಮೂಲಕ ನಿರ್ಭಯ ಗೆಳೆಯ ಅವನಿಂದ್ರ ಪಾಂಡೆ ವಿರುದ್ಧ ಸಾಕ್ಷ್ಯ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಗಂಭೀರ ಆರೋಪ ಮಾಡಿದ್ದಾರೆ.
ಸಾಕ್ಷ್ಯ ಚಿತ್ರ ವಿವಾದ ಕುರಿತಂತೆ ದಿನಪತ್ರಿಕೆಯೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಲೆಸ್ಲಿ ಉಡ್ವಿನ್ ಅವರು, ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ನಿರ್ಭಯ ಗೆಳಯನ ಸಂದರ್ಶನ ಪ್ರಮುಖವಾಗಿತ್ತು. ಈ ಕಾರಣದಿಂದ ನಿರ್ಭಯ ಗೆಳೆಯ ಅವನಿಂದ್ರ ಪಾಂಡೆ ಬಳಿ ಹೋಗಿ ಸಂದರ್ಶನ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಈ ಸಂದರ್ಶನಕ್ಕೆ ಹಣ ನೀಡುವಂತೆ ಆತ ಕೇಳಿದ್ದ, ಇದಕ್ಕೆ ಒಪ್ಪದ ನಾವು ಹಣ ನೀಡದೆ ಸಂದರ್ಶನ ನೀಡುವಂತೆ ವರ್ಷಗಳ ಹಿಂದಿನಿಂದಲೂ ಪ್ರಯತ್ನ ನಡೆಸಿದ್ದೆವು ಆದರೆ ಹಣ ನೀಡದೆ ಸಂದರ್ಶನ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿ ಬಿಟ್ಟಿದ್ದ ಎಂದು ಹೇಳಿದ್ದಾರೆ.
ನಿರ್ಭಯ ಅತ್ಯಾಚಾರದಲ್ಲಿ ಪ್ರಮುಖ ಆರೋಪಿ ಮುಕೇಶ್ ಸಿಂಗ್ ನನ್ನು ಸಂದರ್ಶನ ಮಾಡುವ ವೇಳೆ, ಘಟನೆ ನಡೆದ ಸಂದರ್ಭದಲ್ಲಿ ಅವನಿಂದ್ರ ಪಾಂಡೆ ಬಸ್ಸಿನ ಹಿಂದಿದ್ದ ಕೊನೆಯ ಸೀಟ್ ನ ಹಿಂದೆ ಅವಿತು ಕುಳಿತುಕೊಂಡಿದ್ದ ಎಂದು ಹೇಳಿದ್ದ. ಈ ವಿಷಯ ಕುರಿತಂತೆ ಸ್ಪಷ್ಟತೆಗಾಗಿ ಅವನಿಂದ್ರ ಪಾಂಡೆ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದೆವು ಆದರೆ ಘಟನೆ ಕುರಿತಂತೆ ಮಾಹಿತಿ ನೀಡಲು ಅವನಿಂದ್ರ ಪಾಂಡೆ ನಿರಾಕರಿಸಿದ್ದರು ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ.
ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ನ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಬಿಬಿಸಿಗೆ ಸರ್ಕಾರ ಹಾಗೂ ನ್ಯಾಯಾಂಗ ಸೂಚನೆ ನೀಡಿತ್ತು. ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಹೀಗಾಗಿ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ 'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರಕ್ಕೆ ದೇಶಾದ್ಯಂತ ನಿಷೇಧ ಹೇರಿತ್ತು.