ದೇಶ

ರಾಹುಲ್ ಅಷ್ಟೇ ಅಲ್ಲ, ವಾಜಪೇಯಿ, ಸೋನಿಯಾ ಗಾಂಧಿಯನ್ನು ವಿಚಾರಣೆ ಮಾಡಲಾಗಿದೆ: ಜೇಟ್ಲಿ

Lingaraj Badiger

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಸರ್ಕಾರ 'ಗೂಢಚರ್ಯೆ' ನಡೆಸುತ್ತಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಅರ್ಥವಿಲ್ಲದ ವಿಷಯ ಪ್ರಸ್ತಾಪಿಸುತ್ತಿದೆ ಎಂದಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಸರ್ಕಾರ ರಾಜಕೀಯ ಪಕ್ಷಗಳಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ ಅವರು, ರಾಹುಲ್ ಗಾಂಧಿ ಅವರ ನಿವಾಸಕ್ಕೆ ದೆಹಲಿ ಪೊಲೀಸರು ತೆರಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ವಿವಿಐಪಿ ಭದ್ರತೆ ಬಗ್ಗೆ ಸದಾ ನಿಗಾ ಇಡುವುದೇ ಅವರ ಕೆಲಸ, ಪೊಲೀಸರು ಅವರ ಕೆಲಸ ಮಾಡಿದ್ದಾರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಮನೆಗೆ ಹೋಗಿ ವಿಚಾರಣೆ ನಡೆಸುವುದು ಅವರ ಕರ್ತವ್ಯ, ರಾಹುಲ್ ಗಾಂಧಿ ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಮನೆಗೂ ಹೋಗಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಹೇಳಿದರು.

ಎನ್‌ಡಿಎ ಯುಪಿಎ ಸರ್ಕಾರದಲ್ಲೂ ಹಲವು ವಿವಿಐಪಿ ಮನೆಗಳಿಗೆ ಹೋಗಿ ಅವರ ಸುರಕ್ಷತೆ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ. ಮನೆಗೆ ಹೋದಾಕ್ಷಣ ಗೂಢಚರ್ಯೆ ಆಗುವುದಿಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದರು.

1999ರಿಂದಲೂ ಈ ರೀತಿಯ ವಿಚಾರಣೆ ಜಾರಿಯಲ್ಲಿದೆ. ವಿವಿಐಪಿಗಳ ಭದ್ರತೆ ದೃಷ್ಟಿಯಿಂದ ವಿಚಾರಣೆ ನಡೆಸಲಾಗುತ್ತದೆ. ಎಲ್ಲರ ಮನೆಗೂ ಹೋದಂತೆ ರಾಹುಲ್ ಗಾಂಧಿ ಅವರ ಮನೆಗೂ ಹೋಗಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

SCROLL FOR NEXT