ನವದೆಹಲಿ: ಇನ್ನು ಮುಂದೆ ಆಧಾರ್ ಕಾರ್ಡ್ ಜೊತೆಗೆ ಮತದಾರ ಚೀಟಿಯನ್ನು ಸೇರ್ಪಡೆ ಮಾಡಲಾಗುವುದು ಇದರಿಂದ ನಕಲಿ ಮತದಾರರನ್ನು ನಿಯಂತ್ರಿಸಬಹುದು ಎಂದು ಚುನಾವಣಾ ಆಯುಕ್ತ ಮುಖ್ಯಸ್ಥ ಹೆಚ್.ಎಸ್. ಬ್ರಹ್ಮ ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿರುವ ಹೆಚ್.ಎಸ್. ಬ್ರಹ್ಮ ಅವರು, ಆಧಾರ್ ಕಾರ್ಡ್ ನೊಂದಿಗೆ ಮತದಾರರ ಚೀಟಿಯನ್ನು ಸೇರ್ಪಡೆ ಮಾಡುವುದರಿಂದ ನಕಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಈ ಪ್ರಯತ್ನದಿಂದ ವಿಶ್ವದಲ್ಲಿಯೇ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಹೊಂದಿರುವ ಮೊದಲ ದೇಶ ಭಾರತ ಎಂದು ಹೆಸರು ಪಡೆಯಲಿದೆ.ಆಗಸ್ಟ್ ತಿಂಗಳೊಳಗೇ ಭಾರತದ 25-30 ಕೋಟಿ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರ ಈ ವರ್ಷದ ಅಂತ್ಯದಲ್ಲಿ ಆಧಾರ್ ಕಾರ್ಡ್ ಜೊತೆಗೆ ಮತದಾರರ ಫೋಟೋ ಹಾಗೂ ಗುರುತಿನ ಚೀಟಿಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಸಾರ್ವಜಿನಕ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್ ನ ಆದೇಶದ ಕುರಿತು ಮಾತನಾಡಿರುವ ಅವರು, ಆಧಾರ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು ಎಂದು ಜನರ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಪ್ರತಿದಿನ ಲಕ್ಷಾಂತರ ಮಂದಿ ಸ್ವತಃ ತಾವೇ ಬಂದು ಆಧಾರ್ ಕಾರ್ಡ್ ಗಾಗಿ ತಮ್ಮ ಹೆಸರುಗಳನ್ನು ನೊಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಆಧಾರ್ ಕಡ್ಡಾಯ ಮಾಡುವುದು ನಮಗೂ ಇಷ್ಟವಿಲ್ಲ. ಆದರೆ ಮತದಾರರೇ ಕಡ್ಡಾಯವಾಗಬೇಕೆಂದು ಆಶಿಸುತ್ತಿದ್ದಾರೆ ಎಂದು ಹೇಳಿದ ಅವರು,10 ವರ್ಷಗಳಿಂದ ಚುನಾವಣೆಯಲ್ಲಿ ಭಾಗವಿಹಿಸದ ಪಕ್ಷಗಳ ನೋಂದಣಿಗಳನ್ನು ರದ್ದು ಮಾಡುವುದರ ಕುರಿತಂತೆ ಚುನಾವಣಾ ಆಯೋಗವು ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.