ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಅಥವಾ ಹಿಂಸಾಚಾರವಾಗಲಿ ಇಲ್ಲವೇ ಇಲ್ಲ. ಇಲ್ಲಿ ಇರುವುದು ಕೇವಲ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಮಾತ್ರ ಎಂದು ಪ್ರತ್ಯೇಕತಾ ವಾದಿ ಹುರಿಯತ್ ನಾಯಕ ಅಲಿ ಶಾ ಗಿಲಾನಿ ಹೇಳಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ 2 ದಿನಗಳ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಇದರ ಬೆನ್ನಲ್ಲೇ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರದಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಗಿಲಾನಿ ಅವರು, ಕಾಶ್ಮೀರದಲ್ಲಿ ಭಯೋತ್ಪಾದನೆಯಾಗಲೀ ಅಥವಾ ಹಿಂಸೆಯಾಗಲೀ ಇಲ್ಲವೇ ಇಲ್ಲ. ಇರುವುದಾದರೆ ಸರ್ಕಾರಿ ಪ್ರಾಯೋಜಿತ ಉಗ್ರವಾದ ಮಾತ್ರ ಎಂದು ಹೇಳಿದ್ದಾರೆ.
ಪಾಕ್ ಹೈಕಮಿಶನರ್ ಕಾರ್ಯಾಲಯದಲ್ಲಿ ನಡೆದ ಪಾಕ್ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಲಿಶಾ ಗಿಲಾನಿ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತಂತೆ ಕಿಡಿಕಾರಿದ್ದರು. ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ಪತ್ರ ಬರೆದು ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣ ಏರ್ಪಟ್ಟರೆ ಮಾತ್ರವೇ ಭಾರತ - ಪಾಕ್ ದ್ವಿಪಕ್ಷೀಯ ಬಾಂಧವ್ಯ ಮತ್ತು ಶಾಂತಿ ಮಾತುಕತೆಗಳು ನಡೆಯಲು ಸಾಧ್ಯ ಎಂದು ಹೇಳಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ವ್ಯಗ್ಯವಾಡಿರುವ ಗಿಲಾನಿ, ಕಾಶ್ಮೀರದಲ್ಲಿ ಭಯೋತ್ಪಾದನೆಯೇ ಇಲ್ಲ ಎಂದು ಹೇಳಿದ್ದರು. ಇನ್ನು ಎರಡು ದಿನಗಳ ಹಿಂದಷ್ಟೇ ಜಮ್ಮು - ಕಾಶ್ಮೀರದಲ್ಲಿ ನಡೆದ ಎರಡು ಉಗ್ರ ದಾಳಿಗಳ ಕುರಿತು ಪತ್ರಕರ್ತರು ವಿಚಾರಿಸಿದಾಗ ಗಿಲಾನಿ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು.