ಕಾಂಗ್ರೆಸ್‍ಗೆ ಆಘಾತ ತಂದ ಸ್ವಪಕ್ಷೀಯ ಮಾತುಗಳು
ನವದೆಹಲಿ: ಒಂಡೆದೆ ಸರಣಿ ಸೋಲು, ಮತ್ತೊಂದೆಡೆ ರಾಹುಲ್ ಗಾಂಧಿ ಕಣ್ಮರೆ, ಇದರ ಜತೆಗೆ ಪಕ್ಷದೊಳಗಿನ ಹಿರಿಯ ನಾಯಕರು ಕೊಂಕು... ಇವು ನಿಜಕ್ಕೂ ಕಾಂಗ್ರೆಸ್ ಅನ್ನು ಧೃತಿಗೆಡಿಸಿವೆ. `ಸೆಕ್ಷನ್ 66ಎ ಜಾರಿಗೆ ತರುವ ಅವಶ್ಯಕತೆಯೇ ಇರಲಿಲ್ಲ, ಸಚಿವರೊಬ್ಬರು ತಮ್ಮ ಕುಟುಂಬದ ರಕ್ಷಣೆಗಾಗಿ ಇದನ್ನು ತಂದಿದ್ದರು' ಎಂಬ ಬುಧವಾರದ ಆರೋಪಕ್ಕೆ ಜತೆಯಾಗಿ, ಗುರುವಾರ ಕೂಡ ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರಜ್ವಾಜ್ ಅವರು ಹಲವು ಬಾಂಬ್ ಸಿಡಿಸಿದ್ದಾರೆ.
ಸೆಕ್ಷನ್ 66ಎ ತರಲು ಅಂದಿನ ಸಚಿವ ಪಿ.ಚಿದಂಬರಂ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಮೂಲಕ ಬುಧವಾರ ಗೌಪ್ಯವಾಗಿಟ್ಟಿದ್ದ ಸಚಿವರ ಹೆಸರನ್ನು ಬಹಿರಂಗ ಮಾಡಿದ್ದಾರೆ. ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಿಯಾಂಕಾ ಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದಷ್ಟೇ ಅಲ್ಲ, ಕಾಂಗ್ರೆಸ್‍ನ ವಿದ್ಯಮಾನಗಳನ್ನು ಗಮನಿಸಿದರೆ ಪಕ್ಷ ಮತ್ತೆಂದೂ ಮೇಲೇಳಲ್ಲ ಎಂದೂ ಭವಿಷ್ಯ ನುಡಿದಿದ್ದಾರೆ.
ಪ್ರಿಯಾಂಕ ಸಾರಥ್ಯ ಬೇಕಿತ್ತು
ಇನ್ನೂ ಏಕೆ ಪ್ರಿಯಾಂಕ ಕರೆತಂದಿಲ್ಲ ಎಂಬುದು ಭಾರದ್ವಾಜ್ ಅವರ ಮಾತು. ಜನ ಪಕ್ಷವನ್ನು ಕೈಬಿಡಲು ಇದೂ ಒಂದು ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಸ್ಥಿತಿ ಸ್ವಲ್ಪವಾದರೂ ಸುಧಾರಿಸ ಬೇಕೆಂದರೆ ಕಠಿಣ ಪರಿಶ್ರಮ ಹಾಕಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜೀವ್‍ಗಾಂಧಿ ಅವರು ಮೃತಪಟ್ಟ ನಂತರವೂ ನಾವು ಅವರನ್ನು ಬೆಂಬಲಿಸಿದೆವು. ಸೋನಿಯಾಜಿ ಬಂದಾಗ ಅವರು ಎಲ್ಲರನ್ನೂ ಹುರಿದುಂಬಿಸಿದರು. ಕಾಂಗ್ರೆಸ್ ಪುನಶ್ಚೇತನವಾಗಲು ಇರುವುದು ಕೋಮುವಾದಿ ಅಥವಾ ಜಾತ್ಯತೀತವಾದದ ಹಾದಿಯಲ್ಲ, ಬದಲಿಗೆ ಪರಿಶ್ರಮ ಎಂದೂ ಅವರು ಹೇಳಿದ್ದಾರೆ.
ಕೈ ಮತ್ತೆ ಚಿಗುರಲ್ಲ
ಎಎನ್‍ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭಾರದ್ವಾಜ್, ಕಾಂಗ್ರೆಸ್ ಮತ್ತೆ ಚಿಗುರಲು ಸಾಧ್ಯವೇ ಇಲ್ಲ. ಪಕ್ಷದ ಮಾತು ಕೇಳಲು ಜನರಂತೂ ಸಿದ್ಧರಿಲ್ಲ. ಇದಕ್ಕೆಲ್ಲ ಸ್ವತಃ ಪಕ್ಷವೇ ಕಾರಣ ಎಂದಿದ್ದಾರೆ. ಜತೆಗೆ, ನಾನು ಯಾವುದಕ್ಕೂ ಆ ಬಡಪಾಯಿ (ಸೋನಿಯಾ ಗಾಂಧಿ)ಯನ್ನು ದೂಷಿಸುವುದಿಲ್ಲ ಎಂದಿದ್ದಾರೆ. ಜತೆಗೆ, ನಾನು ಯಾವುದಕ್ಕೂ ಆ ಬಡಪಾಯಿ (ಸೋನಿಯಾ ಗಾಂಧಿ)ಯನ್ನು ದೂಷಿಸುವುದಿಲ್ಲ ಎಂದಿದ್ದಾರೆ. ಭಾರದ್ವಾಜ್ ರ ಈ ಮಾತುಗಳಿಗೆ ಪಕ್ಷದೊಳಗೇ ತೀರ್ವ ಆಕ್ಷೇಪಗಳು ಎದುರಾಗುವ ಸಾಧ್ಯತೆಯಿದೆ.
ಭಾರದ್ವಾಜ್‍ರ ಈ ಮಾತುಗಳಿಗೆ ಪಕ್ಷದೊಳಗೇ ತೀವ್ರ ಆಕ್ಷೇಪಗಳು ಎದುರಾಗುವ ಸಾಧ್ಯತೆಯಿದೆ. ಭಾರದ್ವಾಜ್ ಅವರ ಮಾತುಗಳು ಕಾಂಗ್ರೆಸ್ ಏನೆಂಬುದನ್ನು ಜಗಜ್ಜಾಹೀರು ಮಾಡಿದೆ.
-ಸಂಬಿತ್ ಪಾತ್ರಾ, ಬಿಜೆಪಿ ನಾಯಕ
ಭಾರದ್ವಾಜ್ ಅವರು ನನ್ನ ಉತ್ತಮ ಸ್ನೇಹಿತ. ನಮ್ಮೆಲ್ಲರ ಅಭಿಪ್ರಾಯಗಳು ಭಿನ್ನವಾಗಿವೆ. ಆದರೂ ಯಾವುದೇ ನಿರ್ಧಾರವನ್ನೂ ಪಕ್ಷದೊಳಗೇ ತೆಗೆದುಕೊಂಡರೆ ಉತ್ತಮ.
-ಸಲ್ಮಾನ್ ಖುರ್ಷಿದ್, ಮಾಜಿ ಸಚಿವ
ರಾಹುಲ್ ವಿರುದ್ಧ ಟೀಕೆ?
ಪಕ್ಷದಲ್ಲಿನ ಹೊಸ ನಾಯಕರನ್ನು ತರಾಟೆಗೆ ತೆಗೆದುಕೊಂಡ ಭಾರದ್ವಾಜ್, ಕಾಂಗ್ರೆಸ್‍ನ ಹಾಲಿ ಸ್ಥಿತಿಗೆ ಅವರೇ ಕಾರಣ ಎಂದಿದ್ದಾರೆ. ಹೊಸ ಮುಖಗಳು ಬಹಳಷ್ಟು ಬಲಿಷ್ಠವಾಗಿವೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಕೇವಲ ಮೂರು-ನಾಲ್ಕು ನಾಯಕರೇ ನಿರ್ಧರಿಸುವಂತಾಗಿದೆ ಎನ್ನುವ ಮೂಲಕ ರಾಹುಲ್ ಗಾಂಧಿ ಅವರನ್ನೇ ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಮೂಲಕ ಹಿರಿ ತಲೆಗಳ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ರಾಹುಲ್ ರಜೆ ಮೇಲೆ ತೆರಳಿದ್ದಾರೆ ಎಂಬುದು ಭಾರದ್ವಾಜ್ ಅವರ ಮಾತಿನಿಂದಾಗಿ ಖಚಿತವಾದಂತಾಗಿದೆ. ಜತೆಗೆ ಹಿರಿಯ, ಅನುಭವಿ ನಾಯಕರ ಕಿವಿಹಿಂಡಿ ಹೊರಕಳುಹಿಸಲಾಗಿದೆ. ಇವೆಲ್ಲವೂ ಪಕ್ಷಕ್ಕೆ ಮುಳುವಾಯಿತು ಎನ್ನುವ ಮೂಲಕ ರಾಹುಲ್‍ಗೆ ಟಾಂಗ್ ನೀಡಿದ್ದಾರೆ. ಜತೆಗೆ, ಮನ ಮೋಹನ್‍ಸಿಂಗ್‍ರಂತಹ ವ್ಯಕ್ತಿಗೆ ಕೋರ್ಟ್ ಸಮನ್ಸ್ ಬಂದಾಗ ಆದ ನಾಟಕಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ ಎಂದೂ ಅವರು ಹೇಳಿದ್ದಾರೆ.