ನವದೆಹಲಿ: ದೂರಸಂಪರ್ಕ ತರಂಗಾಂತರ ಹರಾಜಿನ ಫಲಿತಾಂಶವನ್ನು ಅಂತಿಮಗೊಳಿಸುವುದಕ್ಕೆ ಹೇರಿದ್ದ ತಡೆಯಾಜ್ಞೆಯನ್ನು ಗುರುವಾರ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.
ಜತೆಗೆ, ಈಗಷ್ಟೇ ಪೂರ್ಣಗೊಂಡಿರುವ ಟೆಲಿಕಾಂ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯ ಫಲಿತಾಂಶವನ್ನು ಅಂತಿಮಗೊಳಿಸಿ, ಮುಂದಿನ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ತಕ್ಷಣವೇ ಯಶಸ್ವಿ ಬಿಡ್ಡರ್‍ಗಳ ಮೂಲಕ ಸರ್ಕಾರದ ಬೊಕ್ಕಸಕ್ಕೆ ರು.28 ಸಾವಿರ ಕೋಟಿ ಪಾವತಿಯಾಗಲಿದೆ.
ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್‍ನ ಐಡಿಯಾ ಸಂಸ್ಥೆಯು ಅತಿ ಹೆಚ್ಚಿನ ಬಿಡ್ಡರ್ ಆಗಿದ್ದು, ನಂತರದ ಸ್ಥಾನವನ್ನು ಸುನಿಲ್ ಭಾರ್ತಿ ಮಿತ್ತಲ್‍ರ ಏರ್‍ಟೆಲ್ ಮತ್ತು ಬ್ರಿಟನ್‍ನ ವೊಡಾಫೋನ್ ಸಂಸ್ಥೆ ಪಡೆದುಕೊಂಡಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಜತೆಗೆ, ಇದರಿಂದ ದೂರವಾಣಿ ಕರೆ ದರ ಹೆಚ್ಚಳವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಜಿಎಸ್‍ಎಂ ತಂತ್ರಜ್ಞಾನ ಬಳಸಿ ಮೊಬೈಲ್ ಸೇವೆ ನೀಡುತ್ತಿರುವ ಐಡಿಯಾ ಸೆಲ್ಯುಲಾರ್ ಕಂಪನಿಯು ಗರಿಷ್ಠ ರು.30,306 ಕೋಟಿಯ ಬಿಡ್ ಮಾಡಿ, 900 ಮೆಗಾ ಹರ್ಟ್ಸ್, 1800 ಮೆ.ಹ. ಮತ್ತು 2,100 ಮೆ. ಹ. ತರಂಗಾಂತರಗಳನ್ನು ಖರೀದಿಸಿದೆ. ಏರ್‍ಟೆಲ್ ರು29,130 ಕೋಟಿ ಮತ್ತು ವೊಡಾಫೋನ್ ರು.29,959 ಕೋಟಿ ಬಿಡ್ ಮಾಡಿ ಸ್ಪೆಕ್ಟ್ರಂ ಖರೀದಿಸಿದೆ.