ನವದೆಹಲಿ: ಮಿಜೋರಾಂ ರಾಜ್ಯಪಾಲ ಡಾ. ಅಜೀಜ್ ಖುರೇಷಿ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಿದ್ದಾರೆ.
ಈ ಸಂಬಂಧ ರಾಷ್ಟ್ರಪತಿ ಭವನ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಖುರೇಷಿ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಮುಂದಿನ ರಾಜ್ಯಪಾಲರು ನೇಮಕವಾಗುವವರೆಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರು ಮಿಜೋರಾಂನ ಹೆಚ್ಚುವರಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಕಳೆದ ಜನವರಿಯಲ್ಲಿ ಉತ್ತರಾಖಂಡ್ ನಿಂದ ಮಿಜೋರಾಂ ವರ್ಗವಾಗಿ ಬಂದಿದ್ದ ಅಜೀಜ್ ಅವರ ಅವಧಿ ಮೇ 2017ರವರೆಗೆ ಇತ್ತು.
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯುಪಿಎ ಸರ್ಕಾರದಿಂದ ನೇಮಕಗೊಂಡಿದ್ದ ಅಜೀಜ್ ಅವರಿಗೆ ರಾಜಿನಾಮೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು. ಆದರೆ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅಜೀಜ್ ಅವರನ್ನು ಇಂದು ವಜಾಗೊಳಿಸಲಾಗಿದೆ.
ಈ ಹಿಂದೆ ನರೇಂದ್ರ ಮೋದಿ ಸರ್ಕಾರ, ಗುಜರಾತ್ ರಾಜ್ಯಪಾಲರಾಗಿದ್ದ ಕಮಲಾ ಬೇನಿವಾಲ್ ಅವರನ್ನು ಮಿಜೋರಾಂಗೆ ವರ್ಗಾಯಿಸಿ, ಬಳಿಕ ಅವರನ್ನು ವಜಾಗೊಳಿಸಿತ್ತು. ಬೇನಿವಾಲ್ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸಹ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು.