ನವದೆಹಲಿ: ಆಮ್ ಅದ್ಮಿ ಪಕ್ಷ (ಆಪ್)ದ ಒಳ ಬೇಗುದಿ ಭಾನುವಾರ ಮತ್ತಷ್ಟು ಹದಗೆಟ್ಟಿದೆ. ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್‍ರನ್ನು ಯಕಶ್ಚಿತ್ ಸದಸ್ಯರ ಮಟ್ಟಕ್ಕೆ ಇಳಿಸಿದ ಬಳಿಕ ಪಕ್ಷದ ರಾಷ್ಟ್ರೀಯ ಸಂಚಾಲಕ ಎಲ್ಲ ಸಮಿತಿಗಳನ್ನು ಪುನಾರಚಿಸಿದ್ದಾರೆ. ಪ್ರತಿಯೊಂದರಲ್ಲೂ ತಮ್ಮ ನಿಷ್ಠರನ್ನೇ ಮುಖ್ಯಸ್ಥರು ಮತ್ತು ಸದಸ್ಯರನ್ನೇ ನೇಮಕ ಮಾಡಿದ್ದಾರೆ. ಈ ಮೂಲಕ ಇತರ ರಾಜಕೀಯ ಪಕ್ಷಗಳಿಗೂ ಆಪ್‍ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಪಕ್ಷದ ಆಂತರಿಕ ಲೋಕಪಾಲ ಮುಖ್ಯಸ್ಥ ರಾಮದಾಸ್‍ರನ್ನು ತೆಗೆದು ಹಾಕಲಾಗಿದೆ. ಭಾನುವಾರ ಏಕಾಏಕಿ ನಡೆದ `ತುರ್ತು ಕಾರ್ಯಕಾರಿ ಮಂಡಳಿ' ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ.
ಸಮಿತಿ ಪುನಾರಚನೆ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಾಯಕತ್ವದ ವಿರುದ್ಧ ಬಂಡೆದ್ದ ಆರೋಪಕ್ಕೆ ಗುರಿಯಾಗಿರುವ ಪ್ರಶಾಂತ್ ಭೂಷಣ್,ಯೋಗೇಂದ್ರ ಯಾದವ್ ವಿರುದ್ಧ ಕ್ರಮ ಕೈಗೊಂಡ ಬಳಿಕ ಆಪ್‍ನ ಸಮಿತಿಗಳನ್ನು ಪುನಾರಚನೆ ಮಾಡಲಾಗಿದೆ. ಆಂತರಿಕ ಲೋಕಪಾಲ ಸಮಿತಿ ಮುಖ್ಯಸ್ಥರಾಗಿದ್ದ ನಿವೃತ್ತ ಅಡ್ಮಿರಲ್ ಎಲ್.ರಾಮದಾಸ್‍ರನ್ನು ಪದಚ್ಯುತಿ ಗೊಳಿಸಲಾಗಿದೆ.
ಅವರ ಸ್ಥಾನಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಎನ್.ದಿಲೀಪ್ ಕುಮಾರ್‍ರನ್ನು ನೇಮಿಸಲಾಗಿದೆ. ಅವರ ಜತೆ ರಾಕೇಶ್ ಸಿನ್ಹಾ ಮತ್ತು ಶಿಕ್ಷಣ ತಜ್ಞ ಎಸ್. ಪಿ.ವರ್ಮಾ ರನ್ನು ಸದಸ್ಯ ರನ್ನಾಗಿ ಕೇಜ್ರಿವಾಲ್ ನೇಮಿಸಿದ್ದಾರೆ. ಇನ್ನು ಶಿಸ್ತು ಸಮಿತಿಯನ್ನೂ ಪುನಾರಚಿಸಲಾಗಿದೆ. ಅದರಿಂದಲೂ ಕೂಡ ನ್ಯಾಯವಾದಿ ಪ್ರಶಾಂತ್ ಭೂಷಣ್‍ಗೆ ಕೊಕ್ ನೀಡಲಾಗಿದೆ. ಆಪ್ ನಾಯಕ, ಕೇಜ್ರಿವಾಲ್ ನಿಷ್ಠ ದಿನೇಶ್ ವಾಘೇಲ ನೇತೃತ್ವ ವಹಿಸಲಿದ್ದಾರೆ. ಆಶಿಶ್ ಖೇತಾನ್ ಮತ್ತು ಪಂಕಜ್ ಗುಪ್ತಾ ಸದಸ್ಯರಾಗಿದ್ದಾರೆ.