ದೇಶ

ಜಾಗತಿಕ ಚಿಂತಕನ ಯುಗಾಂತ್ಯ

Rashmi Kasaragodu

ಸಿಂಗಾಪುರ: ಮಾ.23ರಂದು ನಿಧನರಾದ ಸಿಂಗಾಪುರದ ಸ್ಥಾಪಕ ಮತ್ತು ಮೊದಲ ಪ್ರಧಾನಿ ಲೀ ಕ್ವಾನ್ ಯೂ(91) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಲೀ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಅವರೊಬ್ಬ ಜಾಗತಿಕ ಚಿಂತಕ ಎಂದು ಬಣ್ಣಿಸಿರುವ ಮೋದಿ, ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಲೀ ಅವರು ವಹಿಸಿದ ಪಾತ್ರವನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ. ಭಾನುವಾರ ಸಿಂಗಾಪುರದ ಸಂಸತ್ ಭವನದ ಆವರಣದಲ್ಲಿ ಲೀ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿದಾಯ ಕೋರಿದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು.
ನಾನು ಅತ್ಯಂತ ಬೇಸರದ ಕ್ಷಣದಲ್ಲಿ ಸಿಂಗಾಪುರಕ್ಕೆ ಭೇಟಿ ನೀಡುತ್ತಿದ್ದೇನೆ. ಲೀ ಅವರ ನಿಧನವು ಒಬ್ಬ ವ್ಯಕ್ತಿಯ ಅಂತ್ಯವಲ್ಲ, ಒಂದು ಯುಗದ ಅಂತ್ಯ. ಅವರು ಕೇವಲ ಆಗ್ನೇಯ ಏಷ್ಯಾಗೆ ಮಾತ್ರವಲ್ಲ, ಸಂಪೂರ್ಣ ಏಷ್ಯಾಗೆ ಸ್ಪೂರ್ತಿ ನೀಡಿದವರು ಎಂದರು ಮೋದಿ. ಭಾರತ ಮತ್ತು ಸಿಂಗಾಪುರದ ಸಂಬಂಧದ ಬಗ್ಗೆಯೂ ಮಾತನಾಡಿದ ಮೋದಿ, ನಮ್ಮದು ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸಂಬಂಧ ಎಂದರು. ಲೀ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ
ಮೋದಿ ಮಾತ್ರವಲ್ಲದೆ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಗ್ಯೂನ್ ಹೆ, ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್, ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಸೇರಿದಂತೆ ಅನೇಕ ವಿಶ್ವನಾಯಕರು ಪಾಲ್ಗೊಂಡಿದ್ದರು.

SCROLL FOR NEXT