ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.
ಇನ್ನು ಮುಂದೆ ಅವರ ಸುತ್ತಮುತ್ತಲು 60 ಮಂದಿ ಭದ್ರತಾ ಸಿಬ್ಬಂದಿ 24 ಗಂಟೆಗಳ ಕಾಲ ಸರ್ಪಗಾವಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೇಟ್ಲಿ ಅವರಿಗೆ ನೀಡುತ್ತಿದ್ದ ವೈ' ಮಾದರಿ ಭದ್ರತೆಯನ್ನು 'ಝಡ್ ಪ್ಲಸ್' ಶ್ರೇಣಿಗೆ ಹೆಚ್ಚಿಸಲು ಗೃಹ ಇಲಾಖೆ ಸೂಚನೆ ನೀಡಿತ್ತು . ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೈಗಾರಿಕಾ ಭದ್ರತಾ ಪಡೆಯ ೬೦ ಕಮಾಂಡೋಗಳು ಜೇಟ್ಲಿಗೆ ಭದ್ರತೆ ಒದಗಿಸಲಿದ್ದಾರೆ.
ಜೇಟ್ಲಿ ವಾಹನಕ್ಕೆ ಒಂದು ಪೈಲಟ್ ಹಾಗೂ ಇನ್ನೊಂದು ಎಸ್ಕಾರ್ಟ್ ಕಾರಿನ ಭದ್ರತೆ ಸಿಗಲಿದ್ದು ಇದರ ಜತೆಗೆ ಜೊತೆಗೆ ಇಬ್ಬರು ಗನ್‌ಮ್ಯಾನ್‌ಗಳು ಜೇಟ್ಲಿ ಜೊತೆಗೆ ಅವರ ವಾಹನದಲ್ಲೇ ಪ್ರಯಾಣಿಸಿದರೆ ಜೇಟ್ಲಿ ಅವರ ಮನೆಯನ್ನೂ ಇದೇ ಕಮಾಂಡೋಗಳು ಕಾಯಲಿದ್ದಾರೆ.
ಗೃಹ ಇಲಾಖೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಚಿದಂಬರಂ ಸೇರಿದಂತೆ ಹಲವರಿಗೆ ನೀಡಲಾಗುತ್ತಿದ್ದ ಝಡ್ ಪ್ಲಸ್ ಭದ್ರತೆಯನ್ನು ತೆಗೆಯಲು ಸೂಚನೆ ನೀಡಿತ್ತು. ಈಗಿನ ಸರ್ಕಾರದಲ್ಲಿರುವ ಸಚಿವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುತ್ತಿದ್ದ ಭದ್ರತೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿತ್ತು.