ದೇಶ

ಬಾಬರಿ ಧ್ವಂಸ: ಸಿಬಿಐಗೆ ಸುಪ್ರೀಂ ನೋಟಿಸ್

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಈ ನಾಯಕರ ವಿರುದ್ಧ ಇರುವ ಕ್ರಿಮಿನಲ್ ಸಂಚು ಪ್ರಕರಣವನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ನೋಟಿಸ್ ಜಾರಿ ಮಾಡಲಾಗಿದೆ. ನಾಯಕರನ್ನು ದೋಷಮುಕ್ತಗೊಳಿಸಿದ್ದನ್ನು ವಿರೋಧಿಸಿ ಬಾಬರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಹಾಜಿ ಮೆಹಬೂಬ್ ಅಹ್ಮದ್ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಜತೆಗೆ, ಕೇಂದ್ರದಲ್ಲಿ ಈಗ ಎನ್‍ಡಿಎ ಸರ್ಕಾರ ಅಧಿಕಾರಕ್ಕೇರಿರುವ ಕಾರಣ, ಸಿಬಿಐ ಕೂಡ ತನ್ನ ನಿಲುವು ಬದಲಾಯಿಸುವ ಸಾಧ್ಯತೆಯಿದೆ ಎಂದೂ ಅವರು ಅರ್ಜಿಯಲ್ಲಿ ಆರೋಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಪೀಠ, ಬಿಜೆಪಿ ನಾಯಕ ಆಡ್ವಾಣಿ ಹಾಗೂ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಪ್ರತಿಕ್ರಿಯೆ ಕೋರಿ ನೋಟಿಸ್ ಜಾರಿ ಮಾಡಿದೆ.

ಆಡ್ವಾಣಿ ಹಾಗೂ ಇತರೆ 19 ಮಂದಿ ವಿರುದ್ಧದ ಕ್ರಿಮಿನಲ್ ಸಂಚು ಪ್ರಕರಣವನ್ನು ಕೈಬಿಟ್ಟ ಅಲಹಾಬಾದ್ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿ ಈ ಹಿಂದೆ ಸ್ವತಃ ಸಿಬಿಐ ಸುಪ್ರೀಂ ಕೋರ್ಟ್‍ನ ಮೆಟ್ಟಿಲೇರಿತ್ತು. ಮಂಗಳವಾರದ ವಿಚಾರಣೆ ವೇಳೆ ಸಿಬಿಐ ಹೊಸದಾಗಿ ಅಪಿsಡವಿಟ್ ಸಲ್ಲಿಸಲು ಕಾಲಾವಕಾಶ ಕೋರಿದೆ. ಇದಕ್ಕೆ ಒಪ್ಪಿದ ನ್ಯಾಯಪೀಠ, ಸಿಬಿಐಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

SCROLL FOR NEXT