ದೇಶ

ನೇಪಾಳ ಪುನರ್ ನಿರ್ಮಾಣಕ್ಕೆ ಬೇಕು ರು.12 ಸಾವಿರ ಕೋಟಿ

Mainashree

-ನಿಖರ ಲೆಕ್ಕ ಸಿಗಲು ಇನ್ನಷ್ಟು ದಿನಗಳು ಬೇಕಾಗಬಹುದು: ಸರ್ಕಾರ

ಕಠ್ಮಂಡು: ಎಂಟು ದಶಕಗಳ ಬಳಿಕ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಇವುಗಳಲ್ಲಿ ಬಹುತೇಕ ಮನೆಗಳು ನಿರ್ನಾಮ ಗೊಂಡಿವೆ. ರಸ್ತೆ, ವಿದ್ಯುತ್, ಆಸ್ಪತ್ರೆ, ದೂರವಾಣಿ ಸೇರಿ ಬಹುತೇಕ ಮೂಲಸೌಲಭ್ಯಗಳು ಸಂಪೂರ್ಣ ಹಾನಿಗೀಡಾಗಿವೆ.

ಮನೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಮೂಲ ಸೌಲಭ್ಯಗಳನ್ನು ಪುನರ್ ನಿರ್ಮಿಸಲು ಕನಿಷ್ಠ ರು.12 ಸಾವಿರ ಕೋಟಿಯಾದರೂ ಬೇಕು ಎಂದು ನೇಪಾಳದ ಹಣಕಾಸು ಸಚಿವ ರಾಮ್ ಶರಣ್ ಮಹಾತ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ದಾನಿಗಳ ನೆರವು ಕೋರಿದ್ದಾರೆ. ಇದು ಸದ್ಯದ ಅಂದಾಜು ಅಷ್ಟೆ.

ಹಾನಿಯ ನಿಖರ ವರದಿ ಸಿಗಬೇಕಾದರೆ ಇನ್ನಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯು ಈಗಾಗಲೇ 80 ಲಕ್ಷ ಮಂದಿ ಭೂಕಂಪ ದಿಂದಾಗಿ ಸಂತ್ರಸ್ತರಾಗಿದ್ದಾರೆ ಎಂದು ಅಂದಾಜಿಸಿದೆ. ಮುಂದಿನ ಮೂರು ತಿಂಗಳು 2 ಲಕ್ಷ ಮಂದಿಗೆ ಟೆಂಟ್‍ಗಳು, ನೀರು, ಆಹಾರ ಮತ್ತು ಔಷಧಗಳ ಅಗತ್ಯಬೀಳಲಿದೆ ಎಂದು ಹೇಳಿದೆ.

ದೋವಲ್ ಜೈಶಂಕರ್ ನೇಪಾಳದಲ್ಲಿ
ನೇಪಾಳಕ್ಕೆ ಎಲ್ಲ ರೀತಿಯ ನೆರವನ್ನು ಘೋಷಿಸಿರುವ ಭಾರತ, ಅಲ್ಲಿ ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯದ ಪರಿಶೀಲನೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರನ್ನು ಕಳುಹಿಸಿ ಕೊಟ್ಟಿದೆ. ಈ ಇಬ್ಬರೂ ಅಧಿಕಾರಿಗಳು ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲಾ ಅವರ ಜತೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯದ ಕುರಿತು ಚರ್ಚೆ ನಡೆಸಲಿದ್ದಾರೆ. ದೋವಲ್ ಅವರು ಈಗಾಗಲೇ ಗೂರ್ಖಾ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಿಹಾರ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ.

 6 ದಿನವಾದರೂ ಅಡ್ಡಿ

ಬಹುತೇಕ ಮೂಲಸೌಲಭ್ಯಗಳು ಹಾನಿ ಗೀಡಾಗಿರುವುದು ಹಾಗೂ ಮಳೆ ಮತ್ತು ಪದೇ ಪದೆ ಕಂಪಿಸುತ್ತಿರುವ ಭೂಮಿಯಿಂದಾಗಿ ಭಾರಿ ಭೂಕಂಪ ಸಂಭವಿಸಿ ಆರು ದಿನದ ಬಳಿಕವೂ ಪರಿ ಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಿರೀಕ್ಷಿತ ವೇಗ ಪಡೆಯುವಲ್ಲಿ ವಿಫಲವಾಗಿದೆ.

ಪ್ರೇಮ ರಹಸ್ಯ ಬಯಲು ನೇಪಾಳದಲ್ಲಿ ಸಂಭವಿಸಿದ ಭೂಕಂಪವು ಅದೆಷ್ಟೋ ಸಾವಿರ ಮಂದಿಯ ಪ್ರೀತಿಗೆ ಕೊಳ್ಳಿ ಇಟ್ಟಿದೆ. ಆದರೆ, ಈ ಜೋಡಿ ಪಾಲಿಗೆ ಮಾತ್ರ ಭೂಕಂಪ ವರದಾನ. 17 ವರ್ಷದ ರಮೀಳಾ ಶ್ರೇಷ್ಠ ಮತ್ತು ಸಂಜೀಬ್‍ನ ಪ್ರೇಮ ಪ್ರಕರಣ ಈ ಭೂಕಂಪದ ಮೂಲಕ ಬಯಲಾಗಿದೆ. ಮನೆಯವರ ಒಪ್ಪಿಗೆಯೂ ಸಿಕ್ಕಿದೆ.


SCROLL FOR NEXT