ಪನ್ನಾ: ಮಧ್ಯಪ್ರದೇಶದ ಪನ್ನಾದಲ್ಲಿ ಸೋಮವಾರ ಸಂಭವಿಸಿದ ಬಸ್ ದುರಂತದಿಂದ 50 ಮಂದಿ ಸಜೀವ ದಹನವಾಗಿದ್ದಾರೆ.
ಪನ್ನಾ ಹುಲಿ ರಕ್ಷಿತಾರಣ್ಯ ಸಮೀಪದ ಪಂಡಾವ್ ಸಮೀಪದಲ್ಲೇ ಈ ದುರಂತ ಸಂಭವಿಸಿದೆ. ಟ್ರಾವೆಲ್ ಏಜೆನ್ಸಿಯೊಂದಕ್ಕೆ ಸೇರಿದ ಖಾಸಗಿ ಬಸ್ ಮಧ್ಯಪ್ರದೇಶದ ಛತಾರ್‍ಪುರ ಜಿಲ್ಲೆಯಿಂದ ಸತ್ನಾ ಜಿಲ್ಲೆಯತ್ತ ತೆರಳುತ್ತಿತ್ತು. ಪಂಡಾವ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸಮೀಪದಲ್ಲೇ ಇದ್ದ 15 ಅಡಿ ಆಳದ ಕಂದಕಕ್ಕೆ ಬಿತ್ತು. ಬಿದ್ದ ರಭಸಕ್ಕೆ ಬಸ್‍ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಧಿಡೀರನೆ ಬೆಂಕಿ ಹತ್ತಿಕೊಂಡಿತು.
ಹೀಗಾಗಿ ಬಸ್‍ನಲ್ಲಿದ್ದ 50 ಮಂದಿ ಸಜೀವ ದಹನವಾದರೆ, ಇನ್ನೂ ಹಲವರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿಯು ತ್ವರಿತವಾಗಿ ವ್ಯಾಪಿಸಿದ ಕಾರಣ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಅಲ್ಲಿನ ಎಸ್ಪಿ ಐ.ಪಿ. ಅರ್ಜಾರಿಯಾ ತಿಳಿಸಿದ್ದಾರೆ.
ಪ್ರಯಾಣಿಕರಿಂದಲೇ ಮಾಹಿತಿ: ಬಸ್ ದುರಂತಕ್ಕೀಡಾಗುತ್ತಿದ್ದಂತೆ ಪಾರಾದ ಕೆಲವು ಪ್ರಯಾಣಿಕರು ಸ್ವಲ್ಪವೇ ದೂರದಲ್ಲಿದ್ದ ಔಟ್‍ಫೋಸ್ಟ್ ಗೆ ತೆರಳಿ ಪೊಲೀಸರಿಗೆ ಮಾಹಿತಿ ರವಾನಿಸಿದರು.
ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೆಲವರನ್ನು ರಕ್ಷಿಸಿದ್ದು, ಸುಟ್ಟು ಹೋಗಿದ್ದ ದೇಹಗಳನ್ನು ಹೊರಗೆ ತೆಗೆದರು.
ಎಲ್ಲೆಲ್ಲಾಗಿತ್ತು ದುರಂತ?
* 2013ರ ಅಕ್ಟೋಬರ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ನ ವೋಲ್ವೋ ಬಸ್‍ಗೆ ಬೆಂಕಿ ಹತ್ತಿ 40 ಮಂದಿ ಸಾವಿಗೀಡಾಗಿದ್ದರು.
* 2014ರ ಏಪ್ರಿಲ್‍ನಲ್ಲಿ ಇದೇ ಟ್ರಾವೆಲ್ಸ್‍ನ ಮತ್ತೊಂದು ವೋಲ್ವೋ ಬಸ್ ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ದಾರಿಯಲ್ಲಿ ಬೆಂಕಿ ಹತ್ತಿ 6 ಮಂದಿ ಮೃತಪಟ್ಟಿದ್ದರು.
* 2014ರ ಜನವರಿಯಲ್ಲಿ ಮಹಾರಾಷ್ಟ್ರದ ಠಾಣೆಯಲ್ಲಿ ಬಸ್‍ವೊಂದು ಡೀಸೆಲ್ ಟ್ಯಾಂಕರ್‍ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್‍ಗೆ ಬೆಂಕಿ ಹತ್ತಿ 8 ಮಂದಿ ಸಜೀವ ದಹನವಾಗಿದ್ದರು.
ಕುಟುಂಬಕ್ಕೆ ತಲಾ
ರು. 2 ಲಕ್ಷ ಪರಿಹಾರ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತರ ಕುಟುಂಬಕ್ಕೆ ತಲಾ ರು. 2 ಲಕ್ಷ, ಗಂಭೀರ ಗಾಯಾಳುಗಳಿಗೆ ತಲಾ ರು. 50 ಸಾವಿರ ಮತ್ತು ಅಲ್ಪ ಪ್ರಮಾಣದ ಗಾಯಗಳಾದವರಿಗೆ ತಲಾ ರು. 20 ಸಾವಿರ ಪರಿಹಾರ ಘೋಷಿಸಿದ್ದಾರೆ. ಜತೆಗೆ, ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.