ದೇಶ

ಕೇಜ್ರಿವಾಲ್ ಸರ್ಕಾರದಿಂದ ಸುದ್ದಿ ವಾಹಿನಿಗಳು ಪ್ರಸಾರ ಮಾಡುವ ವಿಷಯ ಪರಿಶೀಲನೆ

Lingaraj Badiger

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ಮುಗಿಸಿಲು ಮಾಧ್ಯಮಗಳು ಸುಫಾರಿ ಪಡೆದಿವೆ ಎಂದು ಆರೋಪಿಸಿದ ಮಾರನೇ ದಿನವೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ, ಸುದ್ದಿ ವಾಹಿನಿಗಳು ಪ್ರಸಾರ ಮಾಡುವ ವಿಷಯಗಳನ್ನು ಪರಿಶೀಲಿಸುವಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.

ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯದ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಬೆಳಗ್ಗೆ 9ಗಂಟೆಯಿಂದ ರಾತ್ರಿ 11ಗಂಟೆಯವರೆಗೆ ಸುದ್ದಿ ವಾಹಿನಿಗಳು ಯಾವ ಯಾವ ವಿಷಯಗಳನ್ನು ಪ್ರಸಾರ ಮಾಡುತ್ತವೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಸುದ್ದಿ ವಾಹಿನಗಳು ಪ್ರಸಾರ ಮಾಡುವ ಸುದ್ದಿಯ ಬಗ್ಗೆ ಗಮನಹರಿಸುವಂತೆ ಹೇಳಿದ್ದು ಇದೇ ಮೊದಲು. ಇದುವರೆಗೂ ದಿನ ಪತ್ರಿಕೆಗಳಲ್ಲಿ ಬರುವ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ಕಟ್ ಮಾಡಿ ಫೈಲ್ ಮಾಡಲಾಗುತ್ತಿತ್ತು. ಇದೀಗ ಸುದ್ದಿ ವಾಹಿನಿಗಳಲ್ಲಿ ಬರುವ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸುವಂತೆ ಮತ್ತು ಆ ಕುರಿತು ನಿತ್ಯ ಸರ್ಕಾರಕ್ಕೆ ವರದಿ ನೀಡುವಂತೆ ನಿರ್ದೇಶನಾಲಯದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ಖಾಸಗಿ ಮಾಧ್ಯಮವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್ ವಿರುದ್ಧ ವಿರೋಧ ಪಕ್ಷಗಳು ದೊಡ್ಡ ಪಿತೂರಿ ನಡೆಸುತ್ತಿದ್ದು, ವಿರೋಧಿಗಳೊಂದಿಗೆ ಮಾಧ್ಯಮಗಳು ಕೈಜೋಡಿಸಿವೆ. ವಿರೋಧ ಪಕ್ಷದಿಂದ ಸುಪಾರಿ ಪಡೆದಿರುವ ಮಾಧ್ಯಮಗಳು ನಮ್ಮ ವಿರುದ್ಧ ಸುದ್ದಿ ಮಾಡುತ್ತಿದ್ದು, ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದ್ದರು.

SCROLL FOR NEXT