ಕಠ್ಮಂಡು: ಪ್ರಬಲ ಭೂಕಂಪದಿಂದಾಗಿ ನಲುಗಿ ಹೋಗಿದ್ದ ನೇಪಾಳಕ್ಕೆ ನೆರವಾದ ವಿದೇಶಿ ರಕ್ಷಣಾ ಪಡೆಗಳನ್ನು ಅವರವರ ದೇಶಗಳಿಗೆ ಹಿಂತಿರುಗಿವಂತೆ ನೇಪಾಳ ಹೇಳಿದ್ದ ವರದಿಯನ್ನು ನೇಪಾಳ ಸರ್ಕಾರ ಮಂಗಳವಾರ ತಿರಸ್ಕರಿಸಿದೆ.
ವರದಿ ಕುರಿತಂತೆ ಮಾತನಾಡಿರುವ ಮಾಹಿತಿ ಸಚಿವ ಮಿನೇಂದ್ರ ರಿಜಲ್ ಅವರು, ವಿದೇಶಿ ರಕ್ಷಣಾ ಪಡೆಯನ್ನು ನಾವು ಸ್ವಾಗತಿಸುತ್ತೇವೆ. ನೇಪಾಳಿಗರ ರಕ್ಷಣಾ ಕಾರ್ಯಾಚರಣೆ ಹಲವು ದಿನಗಳಿಂದ ನಡೆಯುತ್ತಲಿದ್ದು, ರಕ್ಷಣಾ ಕಾರ್ಯಾಚರಣೆಯಿಂದ ಜನರಿಗೆ ನೆರವು, ಪರಿಹಾರ ನೀಡುವ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭೂಕಂಪದಿಂದಾದ ನಷ್ಟದ ಕುರಿತಂತೆ ಮಾತನಾಡಿರುವ ಅವರು, ಪ್ರಪಂಚದಲ್ಲಿಯೇ ನೇಪಾಳವು ಅತಿ ಬಡ ದೇಶವಾಗಿದ್ದು, ಈ ದೇಶಕ್ಕೆ ಪ್ರವಾಸಿ ತಾಣಗಳಿಂದ ಬರುತ್ತಿದ್ದ ಹಣವೇ ಆರ್ಥಿಕ ನೆರವಾಗಿತ್ತು. ಭೂಕಂಪದಿಂದಾಗಿ ಪ್ರವಾಸಿ ತಾಣಗಳು ನಶಿಸಿಹೋಗಿವೆ. 7,300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಸಿ ತಾಣಗಳ ಮರುನಿರ್ಮಾಣ ಕಷ್ಟಕರವಾಗಿತ್ತು, ಇವುಗಳ ವೆಚ್ಚ ಎಷ್ಟಾಗುತ್ತದೆ ಎಂದು ಈ ವರೆಗೂ ತಿಳಿದುಬಂದಿಲ್ಲ. ಮರುನಿರ್ಮಾಣಕ್ಕೆ ವಿದೇಶಗಳ ನೆರವು ಅಗತ್ಯವಿದೆ. ಈ ಕುರಿತಂತೆ ಸಚಿವರೊಂದಿಗೆ ಸಾಧ್ಯವಾದಷ್ಟು ಬೇಗ ಗಂಭೀರ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಭಾರತದಲ್ಲಿನ ನೇಪಾಳದ ರಾಯಭಾರಿಯಾಗಿ ದೀಪ್ ಕುಮಾರ್ ಉಪಾಧ್ಯಾಯ ಅವರು ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದ್ದು, ವಿದೇಶಿ ರಕ್ಷಣಾ ಪಡೆಯನ್ನು ತಮ್ಮ ದೇಶಕ್ಕೆ ಹಿಂದಿರುಗುವಂತೆ ಹೇಳಲಾಗಿತ್ತು. ಈ ಹೇಳಿಕೆ ಭಾರತಕ್ಕೆ ಬಿಟ್ಟು ಇತರೆ ದೇಶಕ್ಕೆ ಹೇಳಲಾಗಿತ್ತು. ಇದನ್ನು ಯಾವುದೇ ದುರುದ್ದೇಶದಿಂದ ಹೇಳಿಲ್ಲ. ಈ ಹೇಳಿಕೆಯನ್ನು ಧನಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಬೇಕು.
ಸಂಕಷ್ಟದಲ್ಲಿದ್ದ ನೇಪಾಳದ ನೆರವಿಗೆ ಬಂದ ಭಾರತದ ಸಹಾಯ ಹಸ್ತವನ್ನು ನೇಪಾಳ ಸರ್ಕಾರ ಎಂದಿಗೂ ಮರೆಯುವುದಿಲ್ಲ. ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಇದೀಗ ಮುಕ್ತಾಯವಾಗಿದ್ದು, ಸಂತ್ರಸ್ತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದ್ದಾರೆ.
ಭೂಕಂಪದಿಂದ ಹಾನಿಗೊಳಗಾಗಿದ್ದ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೇಪಾಳ ಸರ್ಕಾರ ವಿಫಲಾಗಿದ್ದು, ಭಾರತೀಯ ಸೇನೆ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮತ್ತು ಪರಿಹಾರ ವಿತರಣೆ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದ್ದವಲ್ಲದೇ, ನೇಪಾಳ ಸರ್ಕಾರದ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದಾಗಿ ನೇಪಾಳ ಸರ್ಕಾರ ವಿದೇಶಿ ಸೇನಾ ಪಡೆಗಳು ತಮ್ಮ ತಮ್ಮ ದೇಶಗಳಿಗೆ ಹೊರಟು ಹೋಗುವಂತೆ ತಾಕೀತು ಮಾಡಿತ್ತು ಎಂದು ಹೇಳಲಾಗುತ್ತಿತ್ತು.