ನವದೆಹಲಿ: ಚುನಾವಣೆ ಪೂರ್ವದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೆರೆಹಿಡಿಯುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು, ಅಧಿಕಾರಕ್ಕೆ ಬರುವಾಗ ಬಿಜೆಪಿ ಹಲವು ಭರವಸೆಗಳನ್ನು ನೀಡಿತ್ತು. ಇದರಲ್ಲಿ ಭೂಗತಿ ಪಾತಕಿ ದಾವೂದ್ ಇಬ್ರಾಹಿಂನನ್ನು ಅಧಿಕಾರಕ್ಕೆ ಬಂದ 15 ದಿನಗಳ ಒಳಗೆ ಸೆರೆಹಿಡಿಯಲಾಗುವುದು ಎಂದು ಹೇಳಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ದಾವೂದ್ ಪತ್ತೆಯಾಗಿಲ್ಲ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಾಜಿ ಕೇಂದ್ರೀಯ ತನಿಖಾ ದಳ (ಸಿಬಿಐ) ಜಂಟಿ ನಿರ್ದೇಶಕ ಶಾಂತನೂ ಸೇನ್ ಅವರು, ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯುವುದು ಬಹಳ ಕಷ್ಟದ ವಿಷಯ. ದಾವೂದ್ ಹಾಗೂ ಇನ್ನಿತರೆ ಭೂಗತ ಪಾತಕಿಗಳು ಪಾಕಿಸ್ತಾನದೊಂದಿಗೆ ಕೆಲವು ಒಪ್ಪಂದಗಳಿಗೆ ಸಿಲುಕಿ ಬಂಧಿತರಾಗಿರುತ್ತಾರೆ. ಈ ಒಪ್ಪಂದಗಳು ಕೈ ಬರಹಗಳಿಂದಲ್ಲದೇ ಬಾಯಿಮಾತಿನಿಂದಾಗಿರುತ್ತದೆ. ನಾವು ನಮ್ಮಲ್ಲಿರುವ ಮೂಲಗಳನ್ನು ಬಳಸಿಕೊಂಡು ದಾವೂದ್ ಇರುವ ಸ್ಥಳವನ್ನು ಕಂಡುಹಿಡಿಯಬಹುದು. ಆದರೆ ಇತರೆ ದೇಶಕ್ಕೆ ಹೋಗಿ ಆತನನ್ನು ಸೆರೆಹಿಡಿದು ಭಾರತಕ್ಕೆ ಕರೆತರಲಾಗುವುದಿಲ್ಲ ಎಂದು ಹೇಳಿದ್ದಾರೆ.
ದಾವೂದ್ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿರುವ ಹರಿಭಾಯ್ ಪರ್ತಿಭಾಯ್ ಚೌಧರಿ ಅವರು ದಾವೂದ್ ಎಲ್ಲಿದ್ದಾನೆ ಎಂಬುದು ಈ ವರೆಗೂ ಯಾರೊಬ್ಬರಿಗೂ ತಿಳಿದಿಲ್ಲ. ಆದರೆ ಎಲ್ಲಿದ್ದಾನೆ ಎಂದು ತಿಳಿದರೆ ಆ ದೇಶದೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಆತನನ್ನು ಸೆರೆಹಿಡಿಯಬಹುದು ಎಂದು ಹೇಳಿದ್ದಾರೆ.