ನವದೆಹಲಿ: 2011ರ ಮಾಹಿತಿದಾರ ರಕ್ಷಣಾ ಕಾಯ್ದೆಯ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೊಸ ತಿದ್ದುಪಡಿಯ ಪ್ರಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ.
2014ರಲ್ಲೇ ರಾಷ್ಟ್ರಪತಿ ಅಂಕಿತ ಬಿದ್ದಿದ್ದರೂ ಕಾಯ್ದೆ ತಿದ್ದುಪಡಿಗೆ ಇನ್ನೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ವಿಧೇಯಕಕ್ಕೆ ಕ್ಯಾಬಿನೆಟ್ ಅಸ್ತು ಎಂದಿದೆ. ದೇಶದ ಭದ್ರತೆ, ಸಾರ್ವಭೌಮತ್ವ ಹಾಗೂ ಒಗ್ಗಟ್ಟಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿ, ಕಾಯ್ದೆಯ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಈಗ ಕ್ಯಾಬಿನೆಟ್ ಸಮ್ಮತಿ ಸಿಕ್ಕಿರುವುದರಿಂದ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕಕ್ಕೆ ಸಹಿ ಬೀಳಲಿದೆ.ದೇಶದ ಮಾಹಿತಿದಾರರಿಗೆ ಸಾಂವಿಧಾನಿಕ ರಕ್ಷಣೆ ನೀಡುವ ಸಲುವಾಗಿ 2011ರಲ್ಲಿ ಮಾಹಿತಿದಾರ ರಕ್ಷಣಾ ಕಾಯ್ದೆ ಜಾರಿಯಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಈ ಕಾಯ್ದೆಗೆ ಕೆಲವು ತಿದ್ದುಪಡಿ ಕೋರಿದ್ದರಿಂದಲೇ ಈ ಬದಲಾವಣೆಗೆ ಚಾಲನೆ ಸಿಕ್ಕಿತ್ತು.