ಲಖನೌ: ಅಯೋಧ್ಯೆಯಲ್ಲಿ ರಾಮದೇಗುಲ ನಿರ್ಮಿಸುವ ಭರವಸೆಯನ್ನು ಸರ್ಕಾರ ಮರೆತಿಲ್ಲ. ಆದರೆ, ಸದ್ಯ ರಾಮದೇಗುಲ ನಿರ್ಮಾಣಕ್ಕೆ ಸಂಬಂಧಿಸಿದ ನಿಲುವಳಿಗೆ ಸಂಸತ್ತಿನ ಅನುಮೋದನೆ ಪಡೆಯುವುದು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಮಜನ್ಮಭೂಮಿಯಲ್ಲಿ ಮಂದಿರ ಸ್ಥಾಪಿಸಲು ಸಂಸತ್ತಿನ ಅನುಮೋದನೆ ಪಡೆಯಬೇಕಿದೆ. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲದ ಕೊರತೆ ಇರುವ ಹಿನ್ನೆಲೆಯಲ್ಲಿ ಸದ್ಯ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ನಿಲುವಳಿಗೆ ಸಂಸತ್ತಿನ ಅನುಮೋದನೆ ಸಿಗುವುದು ಅಸಾಧ್ಯ ಎಂದು ರಾಜನಾಥ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಜನಾಥ್ ಸಿಂಗ್ ಈ ವಿಚಾರ ತಿಳಿಸಿದ್ದಾರೆ. ಆದರೆ, ಭವಿಷ್ಯದಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲ ಸಿಕ್ಕರೆ ರಾಮಮಂದಿರ ನಿರ್ಮಿಸುವ ಗೊತ್ತುವಳಿ ಮಂಡಿಸಲಿದೆಯೇ ಎನ್ನುವ ಪ್ರಶ್ನೆಗೆ ಮಾತ್ರ ರಾಜನಾಥ್ ಸಿಂಗ್ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ. ಅದೆಲ್ಲ ಕೇವಲ ಊಹೆಯ ಪ್ರಶ್ನೆ ಎಂದು ಹೇಳಿ ಜಾರಿಕೊಂಡಿದ್ದಾರೆ.