ದೇಶ

ಮದುವೆ ಮೆರವಣಿಗೆ ವೇಳೆ ಹೆಲ್ಮೆಟ್ ಧರಿಸಿದ ದಲಿತ ವರ, ಕಲ್ಲು ತೂರಿದ ಗ್ರಾಮಸ್ಥರು

Lingaraj Badiger

ಮದುವೆ ಮೆರವಣಿಗೆಗೆ ಸಾಮಾನ್ಯವಾಗಿ ಮಾಡಬೇಕಾದ ಎಲ್ಲಾ ಸಿದ್ಧತೆಗಳ ಜೊತೆಗೆ ಕುದುರೆ ಮೇಲೆ ಮೆರವಣಿಗೆ ಹೋಗುತ್ತಿದ್ದ ವರನಿಗೆ ಬಲವಂತವಾಗಿ ಒಂದು ಗಟ್ಟಿಮುಟ್ಟಾದ ಹೆಲ್ಮೆಟ್ ಹಾಕಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ವರ ದಲಿತನಾಗಿದ್ದೆ ಇದಕ್ಕೆ ಕಾರಣ. ಈ ಗ್ರಾಮದಲ್ಲಿ ದಲಿತರು ಅದ್ಧೂರಿ ಮದುವೆ ಮೆರವಣಿಗೆ ಅಥವಾ ಕುದುರೆ ಸವಾರಿ ಮಾಡುವಂತಿಲ್ಲ. ಆದರೆ ವರ ಪವನ್ ಮಾಳವೀಯ ತಾನು ದಲಿತನಾಗಿದ್ದರೂ ಗ್ರಾಮಸ್ಥರನ್ನು ಎದುರು ಹಾಕಿಕೊಂಡು ಕುದುರೆ ಮೇಲೆ ಮೆರವಣಿಗೆ ಹೋರಟಿದ್ದ. ಇದು ಮೇಲ್ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಅರಿತ ವರನ ತಂದೆ ತಮ್ಮ ಮಗನ ಮೇಲೆ ಮೇಲ್ವರ್ಗದ ಜನ ಕಲ್ಲು ತೂರಬಹುದು ಎಂಬ ಭಯದಿಂದ ಮಗನಿಗೆ ಬಲವಂತವಾಗಿ ಹೆಲ್ಮೆಟ್ ಹಾಕಿಸಿದ್ದರು ಎಂದು ವರದಿ ಮಾಡಲಾಗಿದೆ.

ಭಾನುವಾರ ರಾತ್ರಿ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಮೆರವಣಿಗೆಯನ್ನು ಅರ್ಧಕ್ಕೆ ತಡೆದ ಮೇಲ್ಜಾತಿ ಪುರುಷರು, ವರನ ಮೇಲೆ ಕಲ್ಲು ತೂರಾಟ ನಡೆಸಿ, ಕುಟುಂಬ ಸದಸ್ಯರ ಮೇಲೂ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ವರನ ಕುಟುಂಬದ ಹಲವರಿಗೆ ಗಾಯಗಳಾಗಿವೆ.

ಮೆರವಣಿಗೆಯನ್ನು ಕೆಲ ಸಮಯ ಸ್ಥಗಿತಗೊಳಿಸಿ, ಬಳಿಕ ಪೊಲೀಸ್ ರಕ್ಷಣೆಯಲ್ಲಿ ಮುಂದುವರೆಸಲಾಯಿತು. ಘಟನೆ ಸಂಬಂಧ ಪೊಲೀಸರು 30 ಗ್ರಾಮಸ್ಥರನ್ನು ಬಂಧಿಸಿದ್ದು, ಅವರ ವಿರುದ್ಧ ಅಟ್ರೊಸಿಟಿ ಕೇಸ್ ದಾಖಲಿಸಿದ್ದಾರೆ.

SCROLL FOR NEXT