ಕೊಲ್ಕತಾ: ನಾನು ಬರೆಯುವಾಗ ಸುಮ್ಮನೆ ಗೀಚುತ್ತೇನೆ. ಚಿತ್ರಗಳ ಬಗ್ಗೆ ತಲೆಕೆಡಿಸಿಕೊಂಡವನೂ ಅಲ್ಲ. ನನಗೆ ಆ ಚಾರ್‌ಕೋಲ್ ಇಷ್ಟ. ಇದು ನನ್ನ ಹವ್ಯಾಸ. ನಾನೊಬ್ಬ ಕಲಾವಿದನೂ ಅಲ್ಲ, ಚಿತ್ರಕಾರನೂ ಅಲ್ಲ ಎಂದು ಕವಿ, ಗೀತೆ ರಚನೆಕಾರ ಗುಲ್ಜಾರ್ ಹೇಳಿದ್ದಾರೆ.
ಹಾರ್ಪರ್ ಕೋಲಿನ್ಸ್ ಪ್ರಕಾಶನದಿಂದ ಪ್ರಕಟಗೊಂಡ ಗುಲ್ಜಾರ್‌ರ ಕಿರುಕವನ ಸಂಕಲನದ ಹೆಸರು ಪ್ಲೂಟೋ. ಈ ಸಂಕಲನದಲ್ಲಿ ಇದೇ ಮೊದಲ ಬಾರಿಗೆ 70ರ ಹರೆಯದ ಗುಲ್ಜಾರ್ ಅವರು ರಚಿಸಿದ ಚಾರ್‌ಕೋಲ್ ಚಿತ್ರಗಳನ್ನು ಬಳಸಲಾಗಿದೆ.
ಸುಮಾರು ವರ್ಷಗಳಿಂದ ಗುಲ್ಜಾರ್ ಚಿತ್ರಗಳನ್ನು ರಚಿಸುತ್ತಿದ್ದು, ನೂರಾರು ಚಿತ್ರಗಳು ಮನೆಯ ಕಪಾಟಿನಲ್ಲಿದೆ.
ಕೆಲವೊಂದು ಚಿತ್ರಗಳನ್ನು ನಾನು ಹರಿದು ಬಿಸಾಡಿದ್ದೇನೆ. ಕೆಲವೊಂದನ್ನು ಇಟ್ಟುಕೊಂಡಿದ್ದೇನೆ. ನಾನು ರಚಿಸಿದ ಚಿತ್ರಗಳನ್ನು ಪ್ರಕಟಿಸಲು ನನಗೆ ಧೈರ್ಯ ಸಾಕಾಗಿಲ್ಲ. ಆದರೆ ಈ ಬಾರಿ ಪುಸ್ತಕದ ಸಂಪಾದಕರು ಚಿತ್ರಗಳನ್ನು ಬಹಳಷ್ಟು ಮೆಚ್ಚಿದ್ದಾರೆ, ಅದಕ್ಕೆ ಪ್ರಕಟಗೊಂಡಿವೆ.
ನಾನು ಚಿತ್ರಗಳನ್ನು ರಚಿಸಲು ಶುರು ಮಾಡಿದ್ದು ಯಾವಾಗ ಎಂಬುದು ನನಗೆ ಗೊತ್ತಿಲ್ಲ. ಬಹಳಷ್ಟು ಚಿತ್ರಗಳು ನನ್ನಲ್ಲಿವೆ. ಮುಂದೊಂದು ದಿನ ನಾನು ಅದನ್ನು ಪ್ರಕಟಿಸುವೆ ಎಂದು ಗುಲ್ಜಾರ್ ಹೇಳಿದ್ದಾರೆ.