

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ ವಸತಿ ಗೃಹಗಳ ವಿರುದ್ಧ ಕ್ರಮಕ್ಕೆ ಬೆಂಗಳೂರು ಪೂರ್ವ ನಗರ ಪಾಲಿಕೆ ಮುಂದಾಗಿದ್ದು, ಪರಿಶೀಲನೆಗೆ ಜಂಟಿ ತಪಸಣಾ ತಂಡವನ್ನು ರಚನೆ ಮಾಡಿದೆ.
ಹೈಕೋರ್ಟ್ ಆದೇಶದಂತೆ ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸಲು ಆರೋಗ್ಯ ಇಲಾಖೆ ಮತ್ತು ನಗರ ಯೋಜನಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಪರಿಶೀಲನಾ ತಂಡವನ್ನು ಪಾಲಿಕೆ ರಚಿಸಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಂಡವನ್ನು ರಚನೆ ಮಾಡಿದ್ದು, 15 ದಿನಗಳೊಳಗೆ ಪರಿಶೀಲನೆ ನಡೆಸಿವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಟ್ಟಡಗಳು ಅನುಮೋದಿತ ಯೋಜನೆಯಂತೆ ನಿರ್ಮಾಣವಾಗಿದೆಯೇ, ವಾಣಿಜ್ಯ ವಲಯದಲ್ಲಿದೆಯೇ, ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆದಿದೆಯೇ ಎಂಬುದರ ಜೊತೆಗೆ ಸಿಸಿಟಿವಿ ವ್ಯವಸ್ಥೆ, ವ್ಯಕ್ತಿಗೆ ಕನಿಷ್ಠ 70 ಚದರ ಅಡಿ ಸ್ಥಳ, ಪ್ರಥಮ ಚಿಕಿತ್ಸೆ, ಸುರಕ್ಷಿತ ಕುಡಿಯುವ ನೀರು, ಆಹಾರ ತಯಾರಿಕೆ ಇದ್ದಲ್ಲಿ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ, ಭದ್ರತಾ ವ್ಯವಸ್ಥೆ, ಕಸದ ವಿಂಗಡಣೆ ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಪ್ರದರ್ಶನ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ.
ಇದೇ ವೇಳೆ ನಿಯಮ ಉಲ್ಲಂಘಿಸಿದ ಪಿಜಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ ಆಯುಕ್ತರು ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2027ರ ರಾಷ್ಟ್ರೀಯ ಜನಗಣತಿಗೆ ಸಿದ್ಧರಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಚಾರ್ಜ್ ಅಧಿಕಾರಿ, ಸಹಾಯಕ ಚಾರ್ಜ್ ಅಧಿಕಾರಿ, ಗಣತಿದಾರ ಮೇಲ್ವಿಚಾರಕರು, ಗಣತಿದಾರರು, ತಾಂತ್ರಿಕ ಸಹಾಯಕರು ಮತ್ತು ಜನಗಣತಿ ಕಾರ್ಯಕ್ಕೆ ಅಗತ್ಯವಿರುವ ಇತರ ಸಿಬ್ಬಂದಿ ಸೇರಿದಂತೆ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ನಿಯೋಜಿಸಿ, ತರಬೇತಿ ನೀಡುವಂತೆ ಸೂಚನೆ ನೀಡಿದರು.
Advertisement