'ಬೆಂಗಳೂರು ಸಿಟಿ ಮಹಿಳೆಯರಿಗೆ ಸುರಕ್ಷಿತವಾಗಿದೆ, ತಡರಾತ್ರಿ ಶೋಗಳಿಗೆ ಹೆಚ್ಚು ಬುಕ್ಕಿಂಗ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ: ನೂತನ ಪೊಲೀಸ್ ಆಯುಕ್ತ ಹಿತೇಂದ್ರ

ಬೆಂಗಳೂರು: ತಡರಾತ್ರಿ ನಡೆಯುವ ಕಾರ್ಯಕ್ರಮಗಳು, ಸಿನಿಮಾ ಪ್ರದರ್ಶನಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳಿಗೆ ಮಹಿಳೆಯರು ಅತಿ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದು ಬೆಂಗಳೂರಿನಲ್ಲಿ ಎಂಬುದನ್ನು ತಂತ್ರಜ್ಞಾನ ಆಧಾರಿತ ದತ್ತಾಂಶ ತೋರಿಸುತ್ತಿದೆ. ಇದು ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬೆಂಗಳೂರು ನಗರ ಪೊಲೀಸ್‌ನ ಮೊದಲ ಹಾಗೂ ನೂತನ ಪೊಲೀಸ್ ಆಯುಕ್ತ (CCoP) ಆರ್. ಹಿತೇಂದ್ರ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಜತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದರು.
1996ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಹಿತೇಂದ್ರ, ಬೆಂಗಳೂರು ನಗರ ಪೊಲೀಸ್ (BCP) ವ್ಯವಸ್ಥೆಯನ್ನು ಐದು ಪೊಲೀಸ್ ಕಮಿಷನರೇಟ್‌ಗಳು ಹಾಗೂ ಆ್ಯಂಟಿ ರೌಡಿ ಸ್ಕ್ವಾಡ್, ಸಂಚಾರ ಮತ್ತು ಅಪರಾಧ ನಿಯಂತ್ರಣ ಘಟಕಗಳಾಗಿ ಪುನರ್‌ರಚಿಸಿದ ಹಿನ್ನೆಲೆಯಲ್ಲಿ, ನವೆಂಬರ್ 18ರಂದು ತಮ್ಮ ಬ್ಯಾಚ್‌ಮೇಟ್ ಹಾಗೂ ಹಿಂದಿನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ನಗರದ ಪೊಲೀಸ್ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮೇಕ್ ಮೈ ಟ್ರಿಪ್ (MMT) ದತ್ತಾಂಶ ಪ್ರಕಾರ, ತಡರಾತ್ರಿ ನಡೆಯುವ ಕಾರ್ಯಕ್ರಮಗಳು, ಶೋಗಳು ಮುಂತಾದವುಗಳಿಗೆ ಬುಕ್ಕಿಂಗ್ ಮಾಡುವ ಮಹಿಳೆಯರ ಸಂಖ್ಯೆ ಬೆಂಗಳೂರಿನಲ್ಲಿ ಅತ್ಯಧಿಕವಾಗಿದೆ. ಮಹಿಳೆಯರು ನಗರದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಭಾವಿಸಿರುವುದು ಸಂತಸದ ವಿಚಾರ.
ಆದಾಗ್ಯೂ, ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಇನ್ನಷ್ಟು ಉತ್ತಮಪಡಿಸುವುದು ನಮ್ಮ ಪ್ರಯತ್ನವಾಗಿದೆ. ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ರೂಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಮಹಿಳೆಯರ ಸುರಕ್ಷತೆ, ಸೈಬರ್ ಭದ್ರತೆ ಹಾಗೂ ಮಾದಕ ವಸ್ತುಗಳ ಹಾವಳಿ ನಿಯಂತ್ರಣ ನಗರ ಪೊಲೀಸರ ಪ್ರಮುಖ ಗುರಿಗಳಾಗಿವೆ ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯ ಪುನರ್ರಚನೆ ಕುರಿತು ಮಾತನಾಡಿದ ಅವರು,ಪೊಲೀಸ್ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿ, ಜನರಿಗೆ ಹೆಚ್ಚು ಸುಲಭವಾಗಿ ಪೊಲೀಸರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶ. ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಯನ್ನು ರದ್ದುಪಡಿಸಲಾಗಿದೆ.
ಜನರು ತಮ್ಮ ವಲಯದ ಪೊಲೀಸ್ ಆಯುಕ್ತರನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಪೊಲೀಸ್ ಆಯುಕ್ತರ ಕಚೇರಿಯಿರುವ ಇನ್‌ಫೆಂಟ್ರಿ ರಸ್ತೆಗೆ ಬರುವ ಅಗತ್ಯವಿಲ್ಲ. ಭಾರತೀಯ ನ್ಯಾಯ ಸಂಹಿತೆ (BNS) ಅಡಿ ನಿಷೇಧಾಜ್ಞೆ ಜಾರಿಗೊಳಿಸುವ ಅಧಿಕಾರ ಹೊರತುಪಡಿಸಿ, ವಲಯ ಪೊಲೀಸ್ ಆಯುಕ್ತರಿಗೆ ನಗರ ಪೊಲೀಸ್ ಆಯುಕ್ತರಷ್ಟೇ ಕಾನೂನು ಅಧಿಕಾರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಹಿಂದೆ ಪೊಲೀಸ್ ಆಯುಕ್ತರ ಅಧೀನದಲ್ಲಿದ್ದ ಕೇಂದ್ರ ಅಪರಾಧ ವಿಭಾಗ (CCB) ನ್ನು ಈಗ ಆ್ಯಂಟಿ ರೌಡಿ ಸ್ಕ್ವಾಡ್ ಮತ್ತು ಕ್ರೈಂ ಕಂಟ್ರೋಲ್ ಘಟಕವಾಗಿ ಬದಲಾಯಿಸಲಾಗಿದೆ. ಇದರ ಮುಖ್ಯಸ್ಥರಾಗಿ ಹಿರಿಯ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ನನಗೆ ವರದಿ ಮಾಡುತ್ತಾರೆ. ನಾನು ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ (DG&IGP) ವರದಿ ಮಾಡುತ್ತೇನೆ. ಇದು ನಮ್ಮ ಆಡಳಿತಾತ್ಮಕ ಶ್ರೇಣಿಯ ವ್ಯವಸ್ಥೆ. ಇದೇ ರೀತಿ, ಐವರು ಪೊಲೀಸ್ ಆಯುಕ್ತರೊಂದಿಗೆ ದಿನಕ್ಕೆ ಎರಡು ಬಾರಿ ಗ್ರೂಪ್ ಕಾಲ್ ನಡೆಸುತ್ತೇನೆ. ಹಿರಿಯ ಸಹೋದ್ಯೋಗಿಯಾಗಿ ಅವರಿಗೆ ಸಲಹೆ ನೀಡುತ್ತೇನೆ. ಆದರೆ ಕಾನೂನು ಮತ್ತು ಆಡಳಿತಾತ್ಮಕವಾಗಿ ಅವರು ಸ್ವತಂತ್ರರಾಗಿದ್ದಾರೆ ಎಂದು ವಿವರಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ವ್ಯವಹಾರಗಳು, ಮಾದಕ ವಸ್ತುಗಳ ಸಂಪರ್ಕ ಹಾಗೂ ಭ್ರಷ್ಟಾಚಾರದಲ್ಲಿ ತೊಡಗದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕ ಹಾಗೂ ರಿಯಲ್ ಎಸ್ಟೇಟ್ ವಿವಾದಗಳ ಕುರಿತು ಅಭಿಪ್ರಾಯ ನೀಡಲು ಐದು ಪೊಲೀಸ್ ಕಮಿಷನರೇಟ್‌ಗಳಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ ಪ್ರಸ್ತಾವನೆಯನ್ನು ಹಿತೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಪೊಲೀಸರಿಗೆ ಇರುವ ವಿವೇಚನಾಧಿಕಾರವನ್ನು ಮಿತಿಗೊಳಿಸುವ ಉದ್ದೇಶದಿಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ ಸಲಹೆ ನೀಡಲಾಗಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ನ್ಯಾಯಾಂಗವನ್ನು ತೊಡಗಿಸಿಕೊಳ್ಳುವುದರಿಂದ ಈ ಕುರಿತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಗೃಹ ಸಚಿವರು ಸೂಚಿಸಿದ್ದಾರೆ.
ಅಲ್ಲದೆ, ಈ ಪ್ರಸ್ತಾವನೆಯ ಬಗ್ಗೆ ಸಂಪೂರ್ಣವಾಗಿ, ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ. ಇಂತಹ ದೂರುಗಳ ಕುರಿತ ಮಾಹಿತಿಯನ್ನು ಲೋಕಾಯುಕ್ತದಿಂದಲೂ ಸಂಗ್ರಹಿಸಬೇಕಿದೆ ಎಂದು ಹಿತೇಂದ್ರ ಹೇಳಿದರು.
ನಗರದಲ್ಲಿ ಮಾದಕ ವಸ್ತುಗಳ ಹಾವಳಿ ಕುರಿತು ಮಾತನಾಡಿದ ನೂತನ ಆಯುಕ್ತರು, ಬೆಂಗಳೂರಿನಲ್ಲಿ ಇತರ ನಗರಗಳಲ್ಲಿರುವಷ್ಟು ಪ್ರಮಾಣದಲ್ಲಿ ಮಾದಕ ವಸ್ತುಗಳ ದುರುಪಯೋಗ ಇಲ್ಲದಿರಬಹುದು. ಆದರೆ, ಪೊಲೀಸರು ಇದನ್ನು ಹಗುರವಾಗಿ ಪರಿಗಣಿಸುವುದಿಲ್ಲ.
ಮಾದಕ ವಸ್ತು ಮುಕ್ತ ನಗರವನ್ನಾಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ವಿಶೇಷ ಪರಿಣತಿ ಹೊಂದಿರುವ ಸಂಸ್ಥೆಗಳ ನೆರವನ್ನೂ ಪಡೆಯಲಾಗುವುದು. 2028ರ ವೇಳೆಗೆ ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸುವ ಸರ್ಕಾರದ ಬದ್ಧತೆಯ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್‌ನ ಮೊದಲ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಬಗ್ಗೆ ಮಾತನಾಡಿದ ಹಿತೇಂದ್ರ, ಈ ಹುದ್ದೆ ದೊರೆತಿರುವುದು ಸಂತೋಷ ಹಾಗೂ ಕೃತಜ್ಞತೆಯ ವಿಚಾರವಾದರೂ, ಇದರೊಂದಿಗೆ ಹೆಚ್ಚಿನ ಜವಾಬ್ದಾರಿಯೂ ಇದೆ ಎಂದರು.
ಬೆಂಗಳೂರು ಕೇವಲ ತಂತ್ರಜ್ಞಾನ ನಗರವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಕೇಂದ್ರ ಹಾಗೂ ಸದಾ ಚಟುವಟಿಕೆಗಳಿಂದ ಕೂಡಿರುವ ನಗರವಾಗಿಯೂ ಬೆಳೆಯಬೇಕೆಂದು ಸರ್ಕಾರ ಬಯಸಿದೆ. ನವೆಂಬರ್ 29ರಂದು ನಡೆಯಲಿರುವ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ನಗರ ಪೊಲೀಸರು ಸಂಪೂರ್ಣ ಸನ್ನದ್ಧರಾಗಿದ್ದಾರೆ. ಬೆದರಿಕೆ ಸಂದೇಶ ಬಂದಿರುವುದು ನಮ್ಮ ಗಮನದಲ್ಲಿದೆ. ಅವರು ಇತರ ನಗರಗಳಲ್ಲಿ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿಯೂ ಇಂತಹ ಬೆದರಿಕೆಗಳು ಬಂದಿದ್ದವು.
ಸುರಕ್ಷಿತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯಕ್ರಮ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರದೃಷ್ಟಕರ. ಆದರೆ, ಒಂದು ಘಟನೆ ಬೆಂಗಳೂರಿನ ಬಗ್ಗೆ ಜನರ ಅಭಿಪ್ರಾಯವನ್ನು ನಿರ್ಧರಿಸಬಾರದು. ನಗರದಲ್ಲಿ ಮತ್ತೆ ಸಂಗೀತ ಕಾರ್ಯಕ್ರಮಗಳು ಹಾಗೂ ದೊಡ್ಡ ಮಟ್ಟದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ವಾತಾವರಣ ನಿರ್ಮಿಸುತ್ತೇವೆ ಎಂದು ನೂತನ ಪೊಲೀಸ್ ಆಯುಕ್ತ ಹಿತೇಂದ್ರ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



