ಮಥುರಾ(ಉತ್ತರಪ್ರದೇಶ): ಮನೆ ಪಾಠಕ್ಕೆ ಬರುತ್ತಿದ್ದ ದಲಿತ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಹಲವಾರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮಥುರಾದ ದ್ವಾರಕೇಶ್ ಕಾಲೋನಿಯಲ್ಲಿ ಖಾಸಗಿಯಾಗಿ ಮನೆ ಪಾಠ ಹೇಳಿ ಕೊಡುತ್ತಿದ್ದ ಸಚಿನ್ ಚೌಧರಿ ಎಂಬಾತ ತನ್ನ ಬಳಿ ಪಾಠಕ್ಕೆ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪ ಮೇಲೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನಿರಂತರ ಅತ್ಯಾಚಾರದಿಂದಾಗಿ ವಿದ್ಯಾರ್ಥಿನಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಕೆಯ ತಾಯಿ ವೈದ್ಯರಲ್ಲಿ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ ಶಿಕ್ಷಕ ಆಕೆ ಗರ್ಭಿಣಿಯಾಗಬಾರದೆಂಬ ಕಾರಣಕ್ಕೆ ಗರ್ಭ ನಿರೋಧಕ ಮಾತ್ರೆಗಳನ್ನು ನೀಡಿದ್ದನೆನ್ನಲಾಗಿದೆ.
ಇದನ್ನು ಅತಿಯಾಗಿ ಸೇವಿಸಿದ್ದ ಬಾಲಕಿ ಅಸ್ವಸ್ಥಗೊಂಡಿದ್ದು, ವೈದ್ಯರು ನೀಡಿದ ಮಾಹಿತಿ ಮೇರೆಗೆ ಘಟನೆಯನ್ನರಿತ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಶಿಕ್ಷಕ ಸಚಿನ್ ಚೌಧರಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿರುವ ಪೊಲೀಸರು ಆರೋಪಿ ಶಿಕ್ಷಕನ ವಿರುದ್ದ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಿದ್ದಾರೆ.