ಸಿಯೋಲ್: ಕಳೆದ ಒಂದು ವರ್ಷದಲ್ಲಿ ವಿಶ್ವದ ರಾಷ್ಟ್ರಗಳಿಗೆ ಭಾರತದ ಬಗ್ಗೆ ಇದ್ದ ದೃಷ್ಟಿಕೋನ ಬದಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಯೋಲ್ ನಲ್ಲಿ ಸೋಮವಾರ ಹೇಳಿದ್ದಾರೆ.
ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. 'ಒಂದು ಸಮಯದಲ್ಲಿ ಭಾರತ ದೇಶ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಭಾವನೆ ಬೇರೆ ದೇಶಗಳಿಗೆ ಇತ್ತು. ಭಾರತೀಯರಿಗೂ ನಾವು ಯಾಕಾದರೂ ಈ ದೇಶದಲ್ಲಿ ಹುಟ್ಟಿದ್ದೇವೆ ಎಂಬ ವಿಷಾದವಿತ್ತು. ಆದರೆ ಈಗ ಆ ಮನೋಭಾವ ಬದಲಾಗಿದೆ. ಭಾರತ ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಮಾರ್ಪಾಡಾಗಿದೆ. ಅವಕಾಶಗಳನ್ನರಸಿ ಹೊರ ದೇಶಗಳಿಗೆ ಹೋದ ಭಾರತೀಯರು ಮತ್ತು ವಿದೇಶೀಯರು ಈಗ ಭಾರತಕ್ಕೇ ಬರಲು ಉತ್ಸುಕರಾಗಿದ್ದಾರೆ ಎಂದರು.
ತಮ್ಮ ದಕ್ಷಿಣ ಕೊರಿಯಾ ಪ್ರವಾಸದ ಪ್ರಾಮುಖ್ಯತೆಯನ್ನು ತಿಳಿಸಿದ ಪ್ರಧಾನಿ, ಭಾರತವನ್ನು ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿಗೆ ತರುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಅಭಿವೃದ್ಧಿ ಒಂದೇ ಭಾರತದ ಸಮಸ್ಯೆಗಳಿಗೆ ಪರಿಹಾರ. ಅಭಿವೃದ್ಧಿಯೆಂದರೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದು, ಉತ್ತಮ ರಸ್ತೆಗಳನ್ನು ನಿರ್ಮಿಸುವುದೆಂದಲ್ಲ. ಜನರ ಜೀವನ ಮಟ್ಟ ಸುಧಾರಿಸುವುದೇ ಅಭಿವೃದ್ಧಿ ಎಂದರು.
ಮಹಿಳೆಯರಿಗೆ ಮನೆಯಲ್ಲಿ ಶೌಚಗೃಹವಿಲ್ಲದೆ ಹೊರಗೆ ಹೋಗಬೇಕಾಗಿ ಬರುವ ಪರಿಸ್ಥಿತಿ ನಿಜವಾಗಿಯೂ ನಾಚಿಗೆಯ ಸಂಗತಿ. ನಮ್ಮ ದೇಶದ ಅನೇಕ ಮಹಿಳೆಯರಿಗೆ ಈಗಲೂ ಈ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಮ್ಮ ಸರ್ಕಾರದ "ಮೇಕ್ ಇನ್ ಇಂಡಿಯಾ'' ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕೆಂದ ಪ್ರಧಾನಿ, 'ಭಾರತವನ್ನು ಒಂದು ಉತ್ಪಾದಕ ದೇಶವನ್ನಾಗಿ ಬದಲಾಯಿಸಬೇಕು, ವಿಶ್ವದ ಉತ್ತಮ ತಂತ್ರಜ್ಞಾನಗಳು ಭಾರತಕ್ಕೆ ಬರುವಂತಾಗಬೇಕು' ಎಂದು ಆಶಿಸಿದರು.