ನವದಹೆಲಿ: ಭಾರತ ವಿರೋಧಿ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿದ್ದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಅವರ ಪಾಸ್ ಪೋರ್ಟ್ ಅರ್ಜಿಯನ್ನು ಬಿಜೆಪಿ ತಿರಸ್ಕರಿಸಿದ್ದು, ಗಿಲಾನಿ ಮೊದಲು ಪ್ರಮಾಣಿಕತೆಯನ್ನು ಪ್ರದರ್ಶಿಸಲಿ ನಂತರ ವಿದೇಶಕ್ಕೆ ಹಾರಲಿ ಎಂದು ಹೇಳಿದೆ.
ಅನಾರೋಗ್ಯದಿಂದ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಪುತ್ರಿ ಫಾರ್ಹತ್ ಜಬೀನ್ ಗಿಲಾನಿಯನ್ನು ನೋಡುವ ಸಲುವಾಗಿ ಗಿಲಾನಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಜಮ್ಮುಮತ್ತು ಕಾಶ್ಮೀರದ ಬಿಜೆಪಿಯು, ಗಿಲಾನಿ ಮೊದಲು ತಾನು ಹಿಂದು ಎಂಬುದನ್ನು ಧೃಡೀಕರಿಸಿ, ಈ ಹಿಂದೆ ತಾವು ನೀಡಿದ್ದ ಭಾರತ ವಿರೋಧಿ ಹೇಳಿಕೆಗಳಿಗೆ ಕ್ಷಮಾಪಣೆ ಕೇಳಲಿ ನಂತರ ಅವರಿಗೆ ಪಾಸ್ ಪೋರ್ಟ್ ನೀಡುತ್ತೇವೆ ಎಂದು ಹೇಳಿದೆ.
ಪಾಸ್ ಪೋರ್ಟ್ ನೀಡುವುದು ಭಾರತೀಯ ನಾಗರೀಕರಿಗೆ. ಭಾರತ ಮತ್ತು ಪ್ರಜಾಪ್ರಭುತ್ವವನ್ನು ನಂಬದೆ ಇರುವವರಿಗಲ್ಲ. ಭಾರತದ ಎಲ್ಲಾ ಸೌಲಭ್ಯಗಳನ್ನು ಪಡೆದು, ಇಲ್ಲೇ ನೆಲೆಸಿ ಈ ದೇಶದ ವಿರುದ್ಧವೇ ಪಿತೂರಿ ನಡೆಸಿ, ಭಾರತ ವಿರೋಧಿ ಹೇಳಿಕೆ ನೀಡುವವರಿಗೆ ಸರ್ಕಾರ ಪಾಸ್ ಪೋರ್ಟ್ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಖಲಿದ್ ಜಹಾಂಗೀರ್ ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ಗಿಲಾನಿ ಹಲವು ತಪ್ಪುಗಳನ್ನು ಮಾಡಿದ್ದು, ತಮ್ಮ ಎಲ್ಲಾ ತಪ್ಪುಗಳಿಗೆ ಕ್ಷಮಾಪಣೆ ಕೇಳಬೇಕು. ನಂತರ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಗಿಲಾನಿ ಪ್ರಮಾಣೀಕರಿಸಿದರೆ ಭಾರತ ಸರ್ಕಾರ ಪಾಸ್ ಪೋರ್ಟ್ ಕುರಿತ ಅವರ ಮನವಿಯನ್ನು ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ.