ನವದೆಹಲಿ: ಉದ್ಯಮ ಸಂಸ್ಥೆಗಳು ನಡೆಸುತ್ತಿರುವ ಒಪ್ಪಂದಗಳು ಮತ್ತು ಖರೀದಿ ಮತ್ತು ವಿಲೀನ ಪ್ರಕ್ರಿಯೆ ಗಳಿಗೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಡೆಸುವ ಬಗ್ಗೆ ಪ್ರಧಾನಿ ಕಾರ್ಯಾಲಯ ಅತೃಪ್ತಿ ವ್ಯಕ್ತಪಡಿಸಿದೆ.
ಇಂಥ ಕ್ರಮಗಳಿಂದ ಬಂಡವಾಳ ಹೂಡಿಕೆ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ತನಿಖಾ ಸಂಸ್ಥೆಯ ನಿರ್ದೇಶಕರಿಗೆ ನಿಲುವು ತಿಳಿಯಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ಐಬಿಎನ್ ಸುದ್ದಿ ವಾಹಿನಿ ವರದಿ ಮಾಡಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿನ ಜಮೀನನ್ನು ಜಿಎಂಆರ್ ಸಂಸ್ಥೆಗೆ ಕಡಿಮೆ ಮೊತ್ತದಲ್ಲಿ ಲೀಸ್ ಮೂಲಕ ನೀಡಿದ ವಿಚಾರ ಸಂಬಂಧ ಸಿಬಿಐ ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ಖಾತೆ ವಿರುದ್ಧ ತನಿಖೆ ನಡೆಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಎಂಆರ್ ವಕ್ತಾರ ``ಇಂಥ ತನಿಖೆ ಬಗ್ಗೆ ಮಾಹಿತಿ ಇಲ್ಲ. 2006ರಲ್ಲಿ ನಿಲ್ದಾಣದ ಉಸ್ತುವಾರಿಯನ್ನು ಜಿಎಂಆರ್ ನೇತೃತ್ವದ ಸಂಸ್ಥೆಗೇ ನೀಡುವಂತೆ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಆದೇಶಿಸಿತ್ತು'' ಎಂದಿದ್ದಾರೆ.