ದೇಶ

ಗುರುದ್ವಾರ ದೇಹ್ರಾ ಸಾಹಿಬ್ ಗೆ ತೆರಳಬೇಕಿದ್ದ ಸಿಖ್ಖರಿಗೆ ಪಾಕಿಸ್ತಾನದಿಂದ ವೀಸಾ ನಿರಾಕರಣೆ

Srinivas Rao BV

ನವದೆಹಲಿ: ಸಿಖ್ ಧರ್ಮದ 5 ನೇ ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನಾಚರಣೆಗಾಗಿ ಪಾಕಿಸ್ತಾನಕ್ಕೆ ತೆರಳಬೇಕಿದ್ದ ಭಾರತದ ಸಿಖ್ ಸಮುದಾಯದ 150 ಯಾತ್ರಾರ್ಥಿಗಳಿಗೆ ಪಾಕಿಸ್ತಾನ ವೀಸಾ ನಿರಾಕರಣೆ ಮಾಡಿದೆ.

ಹುತಾತ್ಮ ದಿನಾಚರಣೆಯನ್ನು ಎರಡು ಭಿನ್ನ ದಿನಗಳಲ್ಲಿ ಆಚರಿಸಲಾಗುತ್ತಿರುವ ಪರಿಣಾಮ, ನಿಖರ ದಿನದ ಬಗ್ಗೆ ಗೊಂದಲ ಉಂಟಾಗಿದ್ದು, ವೀಸಾ ನಿರಾಕರಣೆ ಮಾಡಲಾಗಿದೆ ಎಂದು ಪಾಕಿಸ್ತಾನ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಭಾರತದ ಶಿರೋಮಣಿ ಗುರುದ್ವಾರ ಪ್ರಭಂದಕ ಸಮಿತಿಯ ಅಧಿಕಾರಿಗಳ ಪ್ರಕಾರ ಮೇ.22 ರಂದು ಸಿಖ್ ಸಮುದಾಯದವರು  ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನಾಚರಣೆ ಆಚರಿಸಲಿದ್ದಾರೆ. ಲಾಹೋರ್ ನ ಗುರುದ್ವಾರ ದೇಹ್ರಾ ಸಾಹಿಬ್, ಸಿಖ್ ಧರ್ಮದ ಗುರು ಅರ್ಜನ್ ದೇವ್ ಗೆ ಸಂಬಂಧಿಸಿರುವುದರಿಂದ ಪ್ರತಿ ವರ್ಷ ಸಿಖ್ ಸಮುದಾಯದವರು ಮೇ.22 ರಂದು ಹುತಾತ್ಮ ದಿನವನ್ನು ಆಚರಿಸುತ್ತಾರೆ.

ಆದರೆ ಪಾಕಿಸ್ತಾನ ಮಾತ್ರ, ತನ್ನ ದೇಶದಲ್ಲಿರುವ ಸಿಖ್ಖರು ಜೂ.16 ರಂದು ಹುತಾತ್ಮ ದಿನಾಚರಣೆ ಆಚರಿಸುವುದರಿಂದ ಜೂನ್.8 ರಿಂದ ಜೂನ್.17 ವರೆಗೆ ಭಾರತೀಯರಿಗೆ ವೀಸಾ ನೀಡುವುದಾಗಿ ತಿಳಿಸಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಸ್.ಜಿ.ಪಿ.ಸಿ, ಸದಸ್ಯರು, ನಾವು ಭಾರತದ ಸಂಪ್ರದಾಯದಂತೆ ಹುತಾತ್ಮ ದಿನಾಚರಣೆ ಆಚರಿಸುತ್ತೇವೆ ಹೊರತು ಪಾಕಿಸ್ತಾನದ ಸಂಪ್ರದಾಯದಂತೆ ಅಲ್ಲ ಎಂದು ಹೇಳಿದ್ದಾರೆ.

ಕೆಳೆದ ವರ್ಷವೂ ಪಾಕಿಸ್ತಾನ ವೀಸಾ ನಿರಾಕರಣೆ ಮಾಡಿದ್ದರ ಪರಿಣಾಮ ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ ಎಂದು  ಶಿರೋಮಣಿ ಗುರುದ್ವಾರ ಪ್ರಭಂದಕ ಸಮಿತಿ ಆರೋಪಿಸಿದೆ. ಪಂಜಾಬ್ ನಲ್ಲಿ ಮೇ.22 ರಂದು ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದ್ದು ಸರ್ಕಾರಿ ರಜೆ ಘೋಷಿಸಲಾಗಿದೆ.

SCROLL FOR NEXT