ದೇಶ

ಕಾಶ್ಮೀರದಲ್ಲಿ ಶಂಕಿತ ಉಗ್ರರಿಂದ ಗುಂಡಿನ ದಾಳಿ, 3 ನಾಗರಿಕರಿಗೆ ಗಾಯ

Lingaraj Badiger

ಶ್ರೀನಗರ: ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಸೊಪೊರೆಯಲ್ಲಿರುವ ಟೆಲೆಕಾಂ ಹೌಟ್‌ಲೆಟ್ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರದಿಂದ 52 ಕಿ.ಮೀ ದೂರದಲ್ಲಿರುವ ಸೊಪೊರೆಯ ಇಖ್ಬಾಲ್ ಮಾರುಕಟ್ಟೆಯಲ್ಲಿರುವ ಬಿಎಸ್‌ಎನ್ ಶೋರೂಂ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟೆಲೆಕಾಂ ಆಪರೆಟರ್‌ಗಳನ್ನು ಗುರಿಯಾಗಿಸಿಕೊಂಡು ಉಗ್ರರು ಈ ದಾಳಿ ನಡೆಸಿರುವ ಸಾಧ್ಯತೆ ಇದ್ದು, ಕಳೆದ 48 ಗಂಟೆಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತ ಉಗ್ರರಿಗಾಗಿ ಶೋಧ ಕಾರ್ಯ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT