ಬೆಂಗಳೂರು: ಒಂದಂಕಿ ಲಾಟರಿ ಧಂಧೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಗೃಹ ಕಚೇರಿಯ ಕೃಷ್ಣಾದಲ್ಲಿ ಮಾತನಾಡಿರುವ ಅವರು, ಪ್ರತಿಯೊಂದು ಪ್ರಕರಣವನ್ನು ಸಿಬಿಐ ವಹಿಸಲು ಸಾಧ್ಯವಿಲ್ಲ. ಪ್ರಕರಣ ಕುರಿತಂತೆ ಈಗಾಗಲೇ ಮಧ್ಯಂತರ ವರದಿ ಸರ್ಕಾರದ ಕೈ ಸೇರಿದ್ದು, ಅಂತಿಮ ವರದಿ ಬಂದ ನಂತರ ಅಗತ್ಯವೆನಿಸಿದರೆ ಮಾತ್ರ ಸಿಬಿಐ ತನಿಖೆಗೆ ವಹಿಸುವ ಕುರಿತಂತೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತೆಲಗಿ ಪ್ರಕರಣವನ್ನೂ ಸರ್ಕಾರ ಸಿಬಿಐ ವಹಿಸಲಿಲ್ಲ. ತೆಲಗಿ ಪ್ರಕರಣಕ್ಕಿಂತ ಇದೀಗ ಬೆಳಕಿಗೆ ಬಂದಿರುವ ಲಾಟರಿ ಹಗರಣ ದೊಡ್ಡ ಹಗರಣವಾಗಿದೆ. ಪ್ರಕರಣ ಕುರಿಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ಗುಪ್ತಚರ ಇಲಾಖೆಯ ಕರ್ತವ್ಯ. ಒಂದು ವೇಳೆ ಗುಪ್ತಚರ ಇಲಾಖೆ ಮಾಹಿತಿ ನೀಡಲಿಲ್ಲ ಎಂದಾದಲ್ಲಿ ಗುಪ್ತ ಚರ ಇಲಾಖೆಯೇ ನೇರ ಹೊಣೆಯಾಗುತ್ತದೆ. ಪ್ರಕರಣದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಚ್ ಹಾಗೂ ಅವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಇತರೆ ಉನ್ನತಾಧಿಕಾರಿಗಳು ಭಾಗಿಯಾಗಿರುವ ಸಂಶಯಗಳಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸೇರಿದಂತೆ ಇತರೆ ಪ್ರತಿಪಕ್ಷಗಳ ನಾಯಕರುಗಳು ಒತ್ತಾಯಿಸಿದ್ದರು.