ನವದೆಹಲಿ: ಭಯೋತ್ಪಾದನೆ ನಿಗ್ರಹ ಕುರಿತಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೀಡಿದ್ದ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸೋಮವಾರ ಆಗ್ರಹಿಸಿದ್ದಾರೆ.
ಭಯೋತ್ಪಾದಕರನ್ನು ಭಯೋತ್ಪಾದಕರಿಂದಲೇ ಹಿಮ್ಮೆಟ್ಟಿಸಬೇಕೆಂಬ ರಕ್ಷಣಾ ಸಚಿವರ ಈ ಹೇಳಿಕೆ ವಿವಾದ ಸೃಷ್ಟಿಸಲಿದ್ದು, ದೇಶದ ಘನತೆಗೆ ಚ್ಯುತಿ ತರುವಂತಹ ಹೇಳಿಕೆಯಾಗಿದೆ ಹೀಗಾಗಿ ಪರಿಕ್ಕರ್ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಪಿ. ಚಿದಂಬರಂ ಹೇಳಿದ್ದಾರೆ.
ತಮ್ಮ ಈ ಹೇಳಿಕೆಗೆ ಪಾಕಿಸ್ತಾನ ನೀಡಿರುವ ಪ್ರತಿಕ್ರಿಯೆ ಕುರಿತಂತೆ ಈಗಾಗಲೇ ಪರಿಕ್ಕರ್ ಅವರಿಗೆ ಮನವರಿಕೆಯಾಗಿದೆ ಎಂದು ಅನಿಸುತ್ತಿದೆ. ತಕ್ಷಣವೇ ಮನೋಹರ್ ಪರಿಕ್ಕರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವ ದಾರಿಯನ್ನು ಹುಡುಕಿಕೊಂಡು ಹೇಳಿಕೆಯನ್ನು ಕೈ ಬಿಡುವಂತೆ ಚಿದಂಬರಂ ಪರಿಕ್ಕರ್ ಗೆ ಸಲಹೆ ನೀಡಿದ್ದಾರೆ.
ಇದೇ ವೇಳೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪಾಕಿಸ್ತಾನ ಕಟು ರೀತಿಯಲ್ಲಿ ಉತ್ತರ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಚಿದಂಬರಂ ಅವರು, ಯುಪಿಎ ಸರ್ಕಾರ 10 ವರ್ಷದ ಅವಧಿಯಲ್ಲಿ ಭಾರತ ಎಂದಿಗೂ ಅಪರಾಧಿಗಳಿಗೆ, ಭಯೋತ್ಪಾದಕರ ಚಟುವಟಿಕೆಗೆ ಬೆಂಬಲ ನೀಡುವಂತಹ ಕೆಲಸಗಳಿಗೆ ಬೆಂಬಲ ನೀಡುವಂತಹ ಕೆಲಸ ಮಾಡಿಲ್ಲ. ಪ್ರಸ್ತುತ ಇರುವ ಎನ್ ಡಿಎ ಸರ್ಕಾರವೂ ಈ ರೀತಿಯ ಕೆಲಸಗಳಿಗೆ ಬೆಂಬಲ ನೀಡುವಂತಹ ಕೆಲಸ ಮಾಡುವುದಿಲ್ಲ ಎಂದು ನಮಗೆ ನಂಬಿಕೆಯಿದೆ. ಮನೋಹರ್ ಪರಿಕ್ಕರ್ ನೀಡಿರುವ ಹೇಳಿಕೆ ನಿಯಂತ್ರಣ ರೇಖೆಯನ್ನು ಮೀರಿದ್ದು, ಕೂಡಲೆ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.
ಭಯೋತ್ಪಾದನಾ ಚಟುವಟಿಕೆ ಕುರಿತಂತೆ ಗುರುವಾರ ಮಾತನಾಡಿದ್ದ ರಕ್ಷಣಾ ಸಚಿವರು, 26/11 ಮುಂಬೈ ದಾಳಿ ಮರುಕಳಿಸದಂತೆ ಭಾರತ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎಂಬುದು ಸತ್ಯದ ಮಾತಾಗಿದ್ದು, ಭಯೋತ್ಪಾದಕರನ್ನು ಭಯೋತ್ಪಾದಕರಿಂದಲೇ ಹಿಮ್ಮೆಟ್ಟಿಸಬೇಕು ಎಂದು ಹೇಳಿಕೆ ನೀಡಿದ್ದರು.