ದೇಶ

ಹೆಚ್ಚಿದ ಚಿನ್ನ ಕಳ್ಳಸಾಗಣೆ: 1000 ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ

ನವದೆಹಲಿ: 2014-15ರಲ್ಲಿ ಅಕ್ರಮ ಚಿನ್ನ ಕಳ್ಳಸಾಗಣೆ ದಾಖಲೆ ಪ್ರಮಾಣ ತಲುಪಿದ್ದು, ಆರ್ಥಿಕ ವರ್ಷದಲ್ಲಿ 1000 ಕೋಟಿ ರುಪಾಯಿಗಳ ಕಳ್ಳಸಾಗಣೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಮತ್ತು ಸುಂಕ ಇಲಾಖೆಯು 3,500 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಹಿಂದೆ 2012-13ನೇ ಸಾಲಿನ ವರ್ಷದಲ್ಲಿ ರು.100 ಕೋಟಿ ಮೌಲ್ಯದ 350 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದೆರಡು ವರ್ಷಗಳಿಂದ ಚಿನ್ನದ ಆಮದಿನ ಮೇಲೆ ಶೇ.10 ರಷ್ಟು ಹೆಚ್ಚಳ ಮಾಡಿದ್ದರೂ ಚಿನ್ನ ಕಳ್ಳಸಾಗಣೆಯಲ್ಲಿ ಶೇ.900 ರಷ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಚಿನ್ನ ಸಾಗಣೆಗೆ ಕಳ್ಳರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದು, ನೇಪಾಳ ಮೂಲಕ ಹೆಚ್ಚಿನ ಕಳ್ಳಸಾಗಣೆ ನಡೆದಿರುವುದಾಗಿ ತಿಳಿದುಬಂದಿದೆ. ದುಬೈ, ಥೈಲಾಂಡ್, ಚೀನಾದಿಂದ ನೇಪಾಳಕ್ಕೆ ಚಿನ್ನದ ಕಳ್ಳಸಾಗಣೆದಾರರು ಚಿನ್ನವನ್ನು ತಂದು ಅಲ್ಲಿಂದ ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಭಾರತದಲ್ಲಿ ಚಿನ್ನದ ಮೇಲೆ ಸುಂಕ ಹೆಚ್ಚಳವಾಗಿರುವ ಕಾರಣ ಕಳ್ಳಸಾಗಣೆ ಹೆಚ್ಚಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ನೇಪಾಳ ಒಂದರಲ್ಲೇ 80ರಿಂದ 100 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

SCROLL FOR NEXT