ದೇಶ

ಕೋರ್ಟ್ ಒಳಗೆ ಮಾಡೆಲ್ಸ್ ಆಡಿಷನ್ ನಡೆಸಿದ ಸರಣಿ ಬಾಂಬ್ ಸ್ಪೋಟದ ಆರೋಪಿ!

Sumana Upadhyaya

ಮುಂಬೈ: ಯಾವ್ದಾದ್ರು ಸ್ಟುಡಿಯೋದಲ್ಲಿ ಅಥವಾ ಸುಂದರ ತಾಣಗಳಲ್ಲಿ ಜಾಹೀರಾತು, ಸಿನಿಮಾ ಚಿತ್ರೀಕರಣ ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ.ಆದರೆ ಇಲ್ಲೊಬ್ಬ ಭೂಪ ಜಾಹೀರಾತು ಚಿತ್ರೀಕರಣ ನಡೆಸಿದ್ದು ಕೋರ್ಟ್ ಹಾಲ್ ಒಳಗೆ. ಅದು ಬೇರೆ ಯಾರೂ ಅಲ್ಲ, 1993ರ ಮುಂಬೈ ಸರಣಿ ಸ್ಪೋಟದ ವಿಚಾರಣಾಧೀನ ಆರೋಪಿ  ಗ್ಯಾಂಗ್ ಸ್ಟರ್ ಮುಸ್ತಫ ದೊಸ್ಸ.

ಮುಸ್ತಫ ದೊಸ್ಸನ ವಿಚಾರಣೆ ಮುಂಬೈಯ ಸೆಷನ್ಸ್ ಕೋರ್ಟಿನಲ್ಲಿ ನಡೆಯುತ್ತಿದೆ. ಅಂದು ನ್ಯಾಯಾಧೀಶರು ಆತನನ್ನು ವಿಚಾರಣೆಗೆ ಕರೆದಿದ್ದರು. ಮುಸ್ತಫಗೆ ದುಬೈ ಮೂಲದ ಕಂಪೆನಿಯೊಂದಕ್ಕೆ ಜಾಹೀರಾತು ತಯಾರಿಸಿ ಕೊಡಲು ಆಫರ್ ಸಿಕ್ಕಿತ್ತು. ಅದಕ್ಕೆ ಅವನ ಸಹಚರರ ಮೂಲಕ ಎಂಟು ಮಂದಿ ರೂಪದರ್ಶಿಯರನ್ನು  ಆಡಿಷನ್ ಗೆ ಬರ ಹೇಳಿದ್ದು ಸೀದಾ ನ್ಯಾಯಾಲಯಕ್ಕೆ! ಅಲ್ಲಿ ಅಕ್ರಮವಾಗಿ ಕೋರ್ಟ್ ಹಾಲ್ ಒಳಗೆ 8 ಮಾಡೆಲ್ ಗಳ ಆಡಿಷನ್ ನಡೆಸಿ ಅಂತಿಮ ಸುತ್ತಿಗೆ ಮೂವರನ್ನು  ಆಯ್ಕೆ ಮಾಡಿದ್ದಾನೆ.

ಇವನ ಈ ಅವಾಂತರದಿಂದ ಇರುಸುಮುರುಸಿಗೆ ಒಳಗಾದ ರೂಪದರ್ಶಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾಳೆ. ''ಮುಸ್ತಫನ ಸಹಚರರು ಎಂದು ಹೇಳಿಕೊಂಡು ಇಬ್ಬರು ನನಗೆ ಟೋಕನ್ ಹಣ ನೀಡಿದ್ದರು. ನಂತರ ಅವರು ಪೊಲೀಸ್ ವೇಷದಲ್ಲಿ ಬಂದು ನನ್ನನ್ನು ಹಗ್ಗದಿಂದ ಕಟ್ಟಿಹಾಕಿ ನನ್ನ ಬಳಿ ಇದ್ದ ಹಣವನ್ನು ದೋಚಿದರು'' ಎಂದು  ಪೊಲೀಸರಿಗೆ ದೂರು ನೀಡಿದ್ದಾಳೆ.

ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. 1993, ಮಾರ್ಚ್ ನಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಮೂವರು ಆರೋಪಿಗಳಲ್ಲಿ ಮುಸ್ತಫ ದೊಸ್ಸನೂ ಕೂಡ ಒಬ್ಬ. ಈತನನ್ನು 2003ರಲ್ಲಿ ಬಂಧಿಸಲಾಗಿತ್ತು.  
   

SCROLL FOR NEXT