ದೇಶ

ಸಾಗರದಾಳದಲ್ಲಿ ಸ್ಫೋಟ: ಒಎನ್‌ಜಿಸಿಯಿಂದ 500 ಕೋಟಿ ಪರಿಹಾರ ಕೋರಿದ ಬೆಸ್ತರು

Srinivasamurthy VN

ಮುಂಬೈ: ಬಾಂಬೆ ಹೈ ಪ್ರದೇಶದಲ್ಲಿ ಒಎನ್‌ಜಿಸಿ ಸಂಸ್ಥೆ ನಡೆಸುತ್ತಿರುವ ನಿರಂತರ ಭಾರೀ ಸ್ಫೋಟಗಳಿಂದಾಗಿ ಅಲ್ಲಿನ ಸುತ್ತಮುತ್ತಲಿನ ಮೀನುಗಳ ಸಂತತಿ ನಶಿಸುತ್ತಿದ್ದು, ನಮ್ಮ ವೃತ್ತಿ ಮತ್ತು ಆದಾಯಕ್ಕೆ ಅಪಾಯ ಎದುರಾಗಿದೆ ಎಂದು ಕೋಲಿ ಬೆಸ್ತ ಸಮುದಾಯ ಸಂಸ್ಥೆಯಿಂದ 500 ಕೋಟಿ ರು. ಪರಿಹಾರಕ್ಕೆ ಆಗ್ರಹಿಸಿದೆ.

ಒಎನ್‌ಜಿಸಿ ಸಂಸ್ಥೆಯ ಅಧಿಕಾರಿಗಳು ನಡೆಸಿದ ಭಾರೀ ಸ್ಫೋಟಗಳಿಂದಾಗಿ ಕಳೆದ ಐದು ತಿಂಗಳ ಅವಧಿಯಲ್ಲಿ ಕನಿಷ್ಠ 32 ಡಾಲ್ಫಿನ್‌ಗಳು ಸಾವನ್ನಪ್ಪಿದ್ದು, ಕ್ರಮೇಣ ಈ ಪ್ರದೇಶದ ಮೀನುಗಳನ ಸಂತತಿ ನಶಿಸುತ್ತಿದೆ. ಇದರಿಂದಾಗಿ ಮೀನುಗಾರರಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಈ ಸಂಬಂಧ ಕೋಲಿ ಬೆಸ್ತರು ಈಗಾಗಲೇ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ. ಡಹಾಣು, ಪಾಲ್ಗಾರ್‌, ವಸಾಯಿ ಮತ್ತು ಮುಂಬಯಿ ಪ್ರದೇಶಗಳಲ್ಲಿ ಮೀನುಗಾರಿಕೆ ಮಾಡುವ ಕೋಲಿ ಬೆಸ್ತರು ತಮಗೆ 500 ಕೋಟಿ ರು ಪರಿಹಾರ ಧನವನ್ನು ನೀಡುವಂತೆ ಒಎನ್‌ಜಿಸಿ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಕಳೆದ ಸೋಮವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಖಿಲ ಮಹಾರಾಷ್ಟ್ರ ಮಚ್ಚಿಮಾರ್ ಕೃತಿ ಸಮಿತಿ ಅಧ್ಯಕ್ಷ ದಾಮೋದರ ತಾಂಡೇಲ್‌ ಅವರು ಒಎನ್‌ಜಿಸಿ ಸಾಗರದ ನಡುವೆ ನಡೆಸುತ್ತಿರುವ ಅನ್ವೇಷಣಾ ಕಾರ್ಯದ ಭಾಗವಾಗಿ ನಡೆಸಿದ ಸ್ಫೋಟದ ಪರಿಣಾಮ ಸಾಗರದಲ್ಲಿನ ಪ್ರಾಣಿಗಳ ಬದುಕನ್ನು ನಾಶಪಡಿಸಿದ ವಿಡಿಯೋ ದೃಶ್ಯಾವಳಿಯನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿದ್ದರು. ಈ ಸ್ಫೋಟದ ಪರಿಣಾಮ ಸುಮಾರು 1 ಲಕ್ಷ ಚದರ ಕಿ.ಮೀ. ಪ್ರದೇಶದ ವ್ಯಾಪ್ತಿಯಲ್ಲಿನ ಸಮುದ್ರ ಜೀವ ಸಂಕುಲಕ್ಕೆ ಅಪಾಯ ಬಂದೊದಗಿದೆ ಎಂದು ಅವರು ಹೇಳಿದ್ದರು.

ಮುಂಬಯಿ ಕರಾವಳಿಯ ಡಹಾಣುವಿನಿಂದ ವಸಾಯಿವರೆಗಿನ ಪ್ರದೇಶ, ವೆಸೋವಾ, ಮಡ್‌, ಕಫ್ ಪರೇಡ್‌ ಪ್ರದೇಶಗಳಲ್ಲಿ ಇದೀಗ ಮೀನುಗಾರಿಕೆ ಅಕ್ಷರಶಃ ನಿಂತು ಹೋಗಿದೆ. ಕೇವಲ 15 ದಿನಗಳವರೆಗೆ ಸ್ಫೋಟಗಳನ್ನು ನಡೆಸಲಾಗುವುದು ಎಂದು ಒಎನ್‌ಜಿಸಿ ಆರಂಭದಲ್ಲಿ ತಿಳಿಸಿತ್ತಾದರೂ ಈಗಲೂ ಸಮುದ್ರ ಮಧ್ಯೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಬೆಸ್ತರು ದೂರಿದ್ದಾರೆ. ಆದರೆ ಮೀನುಗಾರರ ಆರೋಪವನ್ನು ತಳ್ಳಿ ಹಾಕಿರುವ ಒಎನ್‌ಜಿಸಿ, ಜಾಗತಿಕ ಅನ್ವೇಷಣಾ ಕಂಪನಿಯಾಗಿರುವ ಒಎನ್‌ಜಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ವಿಧಾನದ ಮೂಲಕವೇ ತನ್ನ ಅನ್ವೇಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT