ನವದೆಹಲಿ: ಎನ್ ಡಿಎ ಸರ್ಕಾರ ನೀಡಿದ್ದ ಚುನಾವಣಾ ಪೂರ್ವ ಭರವಸೆಯಂತೆ ಸೇನೆ ಯಿಂದ ನಿವೃತ್ತಿ ಹೊಂದಿದವರಿಗೆ 'ಸಮಾನ ಶ್ರೇಣಿ, ಸಮಾನ ವೇತನ' ಯೋಜನೆ ಜಾರಿಗೆ ಬರುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಸರ್ಕಾರ ಯೋಜನೆ ಜಾರಿಗೆ ಬದ್ಧವಾಗಿದೆ. ಇದಕ್ಕಾಗಿ ರಕ್ಷಣಾ ಇಲಾಖೆ ಮತ್ತು ಸೇನಾ ಪಡೆಯೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳು ಜಾರಿಗೆ ಬರಬೇಕಾದರೂ ಸಂಬಂಧಪಟ್ಟ ಜನರ ಅಭಿಪ್ರಾಯ ಕೇಳುತ್ತೇವೆ ಎಂದು ಹೇಳಿದ್ದಾರೆ.
ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆ ರಾಜಕೀಯ ಕಾರ್ಯಕ್ರಮವಲ್ಲ. ಈ ಹಿಂದಿನ ಸರ್ಕಾರ ಮಾಜಿ ಯೋಧರಿಗೆ ಸಂಬಂಧಿಸಿದ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನಾಗಲಿ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ವಿಷಯದಲ್ಲಿ ಮಾತನಾಡುವ ಹಕ್ಕು ಅವರಿಗಿಲ್ಲ ಎಂದು ಮೋದಿ ಹೇಳಿದ್ದಾರೆ.