ನವದೆಹಲಿ: ಭೂ ಸ್ವಾಧೀನ ಸುಗ್ರೀವಾಜ್ಞೆ ವಿಷಯ ನನಗೆ ಸಾವು ಬದುಕಿನ ವಿಚಾರವೇನಲ್ಲ ಮತ್ತು ಈ ಕುರಿತಂತೆ ಯಾವುದೇ ನಿರ್ಧಾರ ಹೊರಬಂದರೂ ಅದನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಮೂರನೇ ಬಾರಿಗೆ ಮಂಡನೆ ಮಾಡಲು ಶಿಫಾರಸು ಮಾಡಿತ್ತು. ಈ ಕುರಿತಂತೆ ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅವರು, ಭೂ ಸ್ವಾಧೀನ ಸುಗ್ರೀವಾಜ್ಞೆ ವಿಚಾರ ನನ್ನ ಪಕ್ಷ ಹಾಗೂ ಸರ್ಕಾರದ ಕಾರ್ಯಸೂಚಿಯಾಗಿದ್ದು, ಈ ವಿಚಾರ ನನಗೆ ಸಾವು ಬದುಕಿನ ವಿಚಾರವೇನಲ್ಲ ಎಂದು ಹೇಳಿದ್ದಾರೆ.
ಎನ್ ಡಿಎ ಸರ್ಕಾರ 2014 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಭೂ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಈ ಮಸೂದೆಗೆ ಬಹುಮತ ಸಿಗದ ಕಾರಣ ಮತ್ತೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 2ನೇ ಬಾರಿಗೆ ಮಸೂದೆ ಮಂಡಿಸಿತ್ತು. ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೇಲ್ಮನೆಯಲ್ಲಿ ಒಪ್ಪಿಗೆ ದೊರೆತಿರಲಿಲ್ಲ. ಈ ಕಾರಣದಿಂದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಸುಗ್ರೀವಾಜ್ಞೆಯ ಅವಧಿಯು ಇದೇ ಜೂನ್ 4ಕ್ಕೆ ಮುಕ್ತಾವಾಗಲಿದ್ದು, ಎನ್ ಡಿಎ ಸರ್ಕಾರದ ವಿವಾದಿತ ಭೂ ಸ್ವಾಧೀನ ಕಾಯ್ದೆ ಕುರಿತಂತೆ ಈಗಾಗಲೇ ಹಲವು ಚರ್ಚೆಗಳು ಆರಂಭವಾಗಿವೆ.