ದೇಶ

2013 ಉತ್ತರಾಖಂಡ ಜಲಪ್ರಳಯ: ಪರಿಹಾರ ನಿಧಿಯಲ್ಲಿ ಪಾರ್ಟಿ ಮಾಡಿದ ಅಧಿಕಾರಿಗಳು!

ನವದೆಹಲಿ: 2013ರಲ್ಲಿ ಉತ್ತರಾಖಂಡದಲ್ಲಿ ನಡೆದ ಜಲಪ್ರಳಯಕ್ಕೆ ಸಿಲುಕಿ ಸಾವಿರಾರು ಮಂದಿ ಹಸಿವಿನಿಂದ ನರಳುತ್ತಿದ್ದರೆ, ಪರಿಹಾರ ಕಾರ್ಯಾಚರಣೆ ಮಾಡಬೇಕಿದ್ದ ಅಧಿಕಾರಿಗಳು ಕುರಿ, ಕೋಳಿ ಮಾಂಸ, ಚೀಸ್ ತಿನ್ನುತ್ತಾ ಮಜಾ ಮಾಡುತ್ತಿದ್ದರು!

ಸಂತ್ರಸ್ತರ ಪರಿಹಾರದ ಉಸ್ತುವಾರಿವಹಿಸಿದ್ದ ಅಧಿಕಾರಿಗಳು ಕರ್ತವ್ಯ ಮರೆತು ಬೇಜವಾಬ್ದಾರಿತನದಿಂದ ದುಂದುವೆಚ್ಚ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಅರ್ಧ ಲೀಟರ್ ಹಾಲಿಗೆ ರು.194, ಹೋಟೆಲ್ ನಲ್ಲಿ ತಂಗಿದ್ದಕ್ಕೆ ದಿನಕ್ಕೆ ರು.7 ಸಾವಿರ, ಕೊಟ್ಟವರಿಗೇ ಎರಡೆರಡು ಬಾರಿ ಪರಿಹಾರ, ಒಂದೇ ಅಂಗಡಿಯಿಂದ ಸತತ 3 ದಿನ 1800 ರೈನ್‍ಕೋಟ್ ಖರೀದಿ, ಹೆಲಿಕಾಪ್ಟರ್ ಕಂಪನಿಗೆ ಇಂಧನ ಖರೀದಿಗೆ ರು.98 ಲಕ್ಷ...
ಹೀಗೆ ತಮಗೆ ಬೇಕಾದಂತೆ ಲೆಕ್ಕ ಕೊಟ್ಟಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಉತ್ತರಾಖಂಡ ಮಾಹಿತಿ ಆಯುಕ್ತರು ಈ ವಿವರಗಳನ್ನು ನೀಡಿದ್ದಾರೆ. ಘೋರ ನೈಸರ್ಗಿಕ ದುರಂತದ ಸಂದರ್ಭದಲ್ಲಿ ಅಧಿಕಾರಿಗಳು ಇಂತಹ ಅವ್ಯವಹಾರದಲ್ಲಿ ತೊಡಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಾಹಿತಿ ಆಯುಕ್ತ ಅನಿಲ್ ಶರ್ಮಾ, ಈ ಬಗ್ಗೆ ಸಿಬಿಐ ತನಿಖೆಯಾಗುವಂತೆ ಆಗ್ರಹಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಪರಿಹಾರದಲ್ಲಿ ಗೋಲ್‍ಮಾಲ್: ನ್ಯಾಷನಲ್ ಆ್ಯಕ್ಷನ್ ಫಾರಂ ಫಾರ್ ಸೋಷಿಯಲ್ ಜಸ್ಟಿಸ್‍ನ ಭೂಪೇಂದ್ರ ಕುಮಾರ್ ಎಂಬುವರು ಸಲ್ಲಿಸಿದ್ದ ದೂರಿನನ್ವಯ ಕ್ರಮ ಕೈಗೊಂಡಿರುವ ಶರ್ಮಾ, ಪರಿಹಾರ ಕಾರ್ಯಾಚರಣೆಯ ಬಿಲ್‍ಗಳನ್ನು ಒದಗಿಸುವಂತೆ ವಿವಿಧ ಜಿಲ್ಲೆಗಳಿಗೆ ಸೂಚಿಸಿದ್ದರು. ಅದಕ್ಕೆ ಪ್ರತಿಯಾಗಿ ಸಿಕ್ಕಿರುವ ಮಾಹಿತಿಗಳಲ್ಲಿ ಹಲವು ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಕೆಲವು ಕಾಮಗಾರಿಗಳು 2013ರ ಡಿ.28ರಂದು ಆರಂಭವಾಗಿ 2013ರ ನ.16ರಂದು ಮುಗಿದಿದೆ(ಕಾಮಗಾರಿ ಆರಂಭವಾಗುವುದಕ್ಕೂ 43 ದಿನಗಳ ಮೊದಲೇ ಮುಗಿದಿದೆ) ಎಂದು ಉಲ್ಲೇಖಿಸಲಾಗಿದೆ. ಮತ್ತೊಂದರಲ್ಲಿ, 2013ರ ಜ.22ರಂದು ಪರಿಹಾರ ಕಾರ್ಯ ಆರಂಭವಾಗಿದೆ ಎಂದು ಸೂಚಿಸಲಾಗಿದೆ. ಆದರೆ, ದುರಂತ ನಡೆದದ್ದೇ 6 ತಿಂಗಳ ನಂತರ(ಜೂ.16, 2013). ಈ ಎಲ್ಲ ವಿಚಾರಗಳನ್ನು ಉತ್ತರಾಖಂಡ ಮುಖ್ಯ ಮಂತ್ರಿಯ ಗಮನಕ್ಕೆ ತಂದು, ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಶರ್ಮಾ ತಿಳಿಸಿದ್ದಾರೆ.

SCROLL FOR NEXT