ಹೈದರಾಬಾದ್: ಮತಕ್ಕಾಗಿ ಲಂಚದ ಆರೋಪದ ಮೇರೆಗೆ ತೆಲಂಗಾಣದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಶಾಸಕನೊಬ್ಬನನ್ನು ರು.5 ಕೋಟಿ ಲಂಚ ನೀಡುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ ಭಾನುವಾರ ಬಂಧಿಸಿದೆ.
ವಿಧಾನಪರಿಷತ್ ಚುನಾವಣೆ ವೇಳೆ ಟಿಡಿಪಿ ಅಭ್ಯರ್ಥಿ ಪರ ಮತ ಹಾಕುವಂತೆ ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೆಫನ್ಸನ್ ಅವರಿಗೆ ಲಂಚ ನೀಡುವ ವೇಳೆ ಶಾಸಕ ಎ.ರೇವಂತ್ ರೆಡ್ಡಿ ಅವರನ್ನು ಬಂಧಿಸಲಾಗಿದೆ. ರೇವಂತ್ ರೆಡ್ಡಿ ಅವರು ಎಲ್ವಿಸ್ ಆತ್ಮೀಯರೊಬ್ಬರನ್ನು ಸಂಪರ್ಕಿಸಿ ರು.50 ಲಕ್ಷ ಮುಂಗಡ ನೀಡುವುದಾಗಿ ತಿಳಿಸಿದ್ದರು. ಈ ಕುರಿತು ಎಲ್ವಿಸ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದರು.
ಮೊದಲೇ ನಿರ್ಧರಿಸಿದಂತೆ ರೇವಂತ್ ಅವರು ಲಾಲಾಗುಡಾದಲ್ಲಿರುವ ಎಲ್ವಿಸ್ ನಿವಾಸಕ್ಕೆ ತೆರಳಿ ಲಂಚ ನೀಡಲು ಪ್ರಯತ್ನಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದವರು ಶಾಸಕನನ್ನು ಹಣದ ಸಮೇತ ಬಂಧಿಸಿದ್ದಾರೆ. ವಿಧಾನಪರಿಷತ್ ಚುನಾವಣೆ ಸೋಮವಾರ ನಡೆಯಲಿದೆ.