ನವದೆಹಲಿ: ಭಾರತವು ಪ್ರಪಂಚದ `ಏಳನೇ ಅತ್ಯಂತ ವಿಶ್ವಾಸನೀಯ ರಾಷ್ಟ್ರೀಯ ಬ್ರ್ಯಾಂಡ್' ಆಗಿ ಹೊರಹೊಮ್ಮಿದೆ. ಕಳೆದ ಬಾರಿಗಿಂತ ಒಂದು ಸ್ಥಾನ ಮೇಲಕ್ಕೆ ಜಿಗಿದಿರುವ ಭಾರತ, ತನ್ನ ಬ್ರ್ಯಾಂಡ್ ಮೌಲ್ಯದಲ್ಲಿ ಶೇ.32ರಷ್ಟು ಹೆಚ್ಚಳ ಮಾಡಿಕೊಂಡು, 2.1 ಶತಕೋಟಿ ಡಾಲರ್ ತಲುಪಿದೆ.
ಅಮೆರಿಕವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದ್ದು(ಮೌಲ್ಯ 19.7 ಶತಕೋಟಿ ಡಾಲರ್), ಎರಡನೇ ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಚೀನಾ ಮತ್ತು ಜರ್ಮನಿ ಪಡೆದುಕೊಂಡಿದೆ. ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ ಪಟ್ಟಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಇದೇ ವೇಳೆ, ಪಟ್ಟಿಯಲ್ಲಿರುವ 20 ದೇಶಗಳ ಪಟ್ಟಿಯ ಪೈಕಿ ಭಾರತದ ಬ್ರ್ಯಾಂಡ್ ಮೌಲ್ಯ ಮಾತ್ರವೇ ಅತಿಹೆಚ್ಚು ಅಂದರೆ ಶೇ.32ರಷ್ಟು ಹೆಚ್ಚಳವಾಗಿದೆ. ಪ್ರತಿ ದೇಶದ ಎಲ್ಲ ಬ್ರಾಂಡ್‍ಗಳ ಮಾರಾಟದ 5 ವರ್ಷಗಳ ಮುನ್ಸೂಚನೆ ಆಧಾರದಲ್ಲಿ ಬ್ರ್ಯಾಂಡ್ ಮೌಲ್ಯ ನಿಗದಿಪಡಿಸಲಾಗುತ್ತದೆ.
12 ಸ್ಥಾನಗಳ ಜಂಪ್: ಇದೇ ವೇಳೆ, ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ `ಉದ್ದಿಮೆಸ್ನೆ ೀಹಿ ದೇಶ' ಪಟ್ಟಿಯಲ್ಲಿ ಭಾರತವು 12 ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದ್ದು, 189 ದೇಶಗಳ ಪೈಕಿ 130ನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಭಾರತ 142ನೇ ಸ್ಥಾನದಲ್ಲಿತ್ತು. ಆದರೆ, ಈ ಸೂಚ್ಯಂಕದ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ``ದೇಶದಲ್ಲಿ ಉದ್ದಿಮೆ ವಾತಾವರಣ ಸುಧಾರಣೆಗೆ ಸರ್ಕಾರ ಕೈಗೊಂಡ ಎಲ್ಲ ಕ್ರಮಗಳನ್ನೂ ವಿಶ್ವಬ್ಯಾಂಕ್ ಪರಿಗಣಿಸಿಲ್ಲ. ಪರಿಗಣಿಸಿದ್ದರೆ ಭಾರತದ ಸ್ಥಾನ ಇನ್ನಷ್ಟು ಮೇಲಕ್ಕೇರುತ್ತಿತ್ತು'' ಎಂದಿದ್ದಾರೆ. ಜತೆಗೆ, ಸರ್ಕಾರಗಳು ಭೂಮಿಯ ಲಭ್ಯತೆ, ಪರಿಸರ ಅನುಮತಿ, ಕಟ್ಟಡಗಳ ಹಂಚಿಕೆಗೆ ಸಂಬಂಧಿಸಿದ ಸ್ಥಳೀಯ ಕಾನೂನುಗಳನ್ನು ಮರುಪರಿಶೀಲಿಸಬೇಕಿದೆ ಎಂದೂ ಸಲಹೆ ನೀಡಿದ್ದಾರೆ.