ದೇಶ

ಗುಜರಾತ್ ಗಲಭೆಯಲ್ಲಿ ಸ್ವತಃ ಮೋದಿಯವರೇ ವಾಜಪೇಯಿ ಮಾತು ಕೇಳಿರಲಿಲ್ಲ: ಕಾಂಗ್ರೆಸ್

Manjula VN

ನವದೆಹಲಿ: ಸಿಖ್ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಮೋದಿಯವರು, 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸ್ವತಃ ಅವರೇ ಅಂದಿನ ಪ್ರಧಾನಿ ವಾಜಪೇಯಿಯವರ ಮಾತು ಕೇಳಿರಲಿಲ್ಲ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅವರು, ಸಿಖ್ ಗಲಭೆ ಸಂದರ್ಭದಲ್ಲಿ ಸೇನೆಯನ್ನು ನಿಯೋಜಿಸುವ ಮೂಲಕ ಕಾಂಗ್ರೆಸ್ ಪಕ್ಷ ಗಲಭೆಯನ್ನು ತಡೆಯುವ ಪ್ರಯತ್ನ ಮಾಡಿತ್ತು. ಆದರೆ, 2002ರಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭದಲ್ಲಿ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಮೌನವಾಗಿತ್ತು ಎಂದು ಹೇಳಿದ್ದಾರೆ.

ಗುಜರಾತ್ ಗಲಭೆ ವೇಳೆ ಸೇನೆಯನ್ನು ನಿಯೋಜಿಸದೆ ಮೋದಿ ಹಾಗೂ ಅವರ ಸಚಿವರು ಪರೋಕ್ಷವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದರು. ಗಲಭೆ ಸಂದರ್ಭದಲ್ಲಿ ಸ್ವತಃ ಮೋದಿಯವರೇ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಕೇಳಿರಲಿಲ್ಲ. ಇಂದು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಮೋದಿಯವರು ಮೊದಲು ತಾವು ಮಾಡಿದ್ದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.  

ಇದೇ ವೇಳೆ ರಾಹುಲ್ ಗಾಂಧಿಗೆ ಜಾರಿಯಾದ ನೋಟಿಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಹೊಡೆದಾಟ ಆರಂಭವಾಗಲು ದ್ವೇಷದ ಬೀಜವನ್ನು ಬಿತ್ತುತ್ತಿದೆ ಎಂದು ಹೇಳಿದ್ದ ರಾಹುಲ್ ಗಾಂಧಿಯವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯ ಸಂಭಾಷಣೆಯಲ್ಲಿ ಇಂತಹ ಹೇಳಿಕೆಗಳು ಬರುತ್ತವೆ. ಇದಕ್ಕೆ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

SCROLL FOR NEXT