ಗಡಿನಿಯಂತ್ರಣಾ ರೇಖೆ ಬಳಿ ಕಣ್ಗಾವಲಿರಿಸಿದ ಭಾರತೀಯ ಸೈನಿಕರು
ನವದೆಹಲಿ: ಚಳಿಗಾಲ ಕಾಲಿಡುವ ಮುನ್ನ ಭಾರತದೊಳಗೆ ನುಸುಳಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಬಳಿ ಸುಮಾರು 300 ಉಗ್ರರು ಕಾದು ನಿಂತಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಭಾರತೀಯ ಸೇನೆಯ ಜನರಲ್ ಆಫೀಸರ್ (ಕಮಾಂಡಿಂಗ್) ಲೆ. ಜ. ಎಸ್ ಕೆ ದುವಾ ಅವರು ಈ ವಿಷಯ ತಿಳಿಸಿದ್ದು , ಭಾನುವಾರ ಗುರೇಜ್ ಬಳಿಯಿರುವ ಗಡಿನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬೆನ್ನಲ್ಲೇ ಉಗ್ರರನ್ನು ನುಸುಳುವಂತೆ ಪ್ರೇರೇಪಿಸುತ್ತಿದೆ ಎಂದಿದ್ದಾರೆ.
ಗಡಿನಿಯಂತ್ರಣಾ ರೇಖೆಯಲ್ಲಿ ಮಂಜು ಬೀಳುತ್ತಿರುವ ಸಂದರ್ಭದಲ್ಲೇ ಕದನ ವಿರಾಮ ಉಲ್ಲಂಘಿಸಿ, ಅದರ ನಡುವೆ ಉಗ್ರರನ್ನು ಕಾಶ್ಮೀರಕ್ಕೆ ನುಸುಳುವಂತೆ ಮಾಡುವುದು ಪಾಕ್ ಉದ್ದೇಶ ಎಂದು ಜನರಲ್ ದುವಾ ಹೇಳಿದ್ದಾರೆ.
ಚಳಿಗಾಲ ಆರಂಭವಾಗುವ ಮುನ್ನವೇ ಅವರು ಭಾರತದೊಳಗೆ ನುಸುಳಲು ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಅವರು ನುಸುಳಿದರೂ, ಗುಂಡಿನ ಕಾಳಗ ಮಾಡಿ ವಾಪಸ್ ಹೋಗುವ ಸಾಧ್ಯತೆಯಿದೆ.
ಈಗಾಗಲೇ ಗಡಿ ನಿಯಂತ್ರಣಾ ರೇಖೆಯ ಬಳಿ ಬಿಗಿ ಭದ್ರತೆ ಏರ್ಪಡಿಸಿದ್ದು, ಹೊರಗಿನಿಂದ ಯಾರೊಬ್ಬರೂ ನುಸುಳದಂತೆ ಸೇನೆ ಕಣ್ಗಾವಲು ಇರಿಸಿದೆ ಎಂದು ಎಂದು ಸೇನಾಧಿಕಾರಿ ಹೇಳಿದ್ದಾರೆ.