ನವದೆಹಲಿ: ಭಾರತದಲ್ಲಿ ಗಜಲ್ ಕಚೇರಿ ನಡೆಸುವುದಕ್ಕೆ ಇನ್ಮುಂದೆ ನಾನು ಬರುವುದಿಲ್ಲ ಎಂದು ಪಾಕಿಸ್ತಾನದ ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಹೇಳಿರುವುದಾಗಿ ವರದಿಯಾಗಿದೆ.
ಈ ಹಿಂದೆ ಭಾರತದಲ್ಲಿ ನಿಗದಿಯಾಗಿರುವ ಅವರ ಎಲ್ಲ ಸಂಗೀತ ಕಾರ್ಯಕ್ರಮಗಳನ್ನು ರದ್ದು ಪಡಿಸಿರುವ ಗುಲಾಂ ಅಲಿ, ಈ ಎಲ್ಲ ರಾಜಕೀಯ ಜಟಾಪಟಿಗಳು ಮುಗಿಯುವವರೆಗೆ ನಾನು ಭಾರತಕ್ಕೆ ಮರಳಲಾರೆ ಎಂದಿದ್ದಾರೆ.
ಪಾಕಿಸ್ತಾನಿ ಗಾಯಕನಿಗೆ ಭಾರತದಲ್ಲಿ ಸಂಗೀತ ಕಚೇರಿ ನಡೆಸಲು ಅನುಮತಿ ನೀಡಿರುವ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಸಂಘರ್ಷ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ನನ್ನ ಹೆಸರನ್ನು ರಾಜಕೀಯ ಲಾಭಕ್ಕಾಗಿ ಯಾರೂ ಬಳಸುವುದು ಬೇಡ ಎಂದು ಗುಲಾಂ ಅಲಿ ಹೇಳಿದ್ದಾರೆ .
ಕಳೆದ ತಿಂಗಳು ಮುಂಬೈಯ ಷಣ್ಮುಕಾನಂದ ಹಾಲ್ ನಲ್ಲಿ ಗುಲಾಂ ಅಲಿ ಅವರ ಸಂಗೀತ ಕಚೇರಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಪಾಕ್ ಗಾಯಕನಿಗೆ ಇಲ್ಲಿ ಅವಕಾಶ ನೀಡಲಾರೆವು ಎಂದು ಅಬ್ಬರಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ , ಆಯೋಜಕರನ್ನು ಭೇಟಿ ಮಾಡಿ ಬೆದರಿಕೆಯನ್ನೊಡ್ಡಿದ್ದರು. ಈ ಹಿನ್ನಲೆಯಲ್ಲಿ ಪ್ರಸ್ತುತ ಸಂಗೀತ ಕಾರ್ಯಕ್ರಮ ರದ್ದುಗೊಂಡಿತ್ತು. ಪಾಕಿಸ್ತಾನದ ಉಗ್ರರು ಭಾರತದ ಮೇಲೆ ದಾಳಿ ನಡೆಸುತ್ತಲೇ ಇರುವಾಗ ಪಾಕ್ ಕಲಾವಿದನಿಗೆ ನಮ್ಮ ಮಣ್ಣಿನಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡುವುದಿಲ್ಲ ಎಂಬುದು ಶಿವಸೇನೆಯ ವಾದವಾಗಿದೆ.
ಮುಂಬೈನಲ್ಲಿ ಕಾರ್ಯಕ್ರಮ ರದ್ದುಗೊಂಡ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುಲಾಂ ಅಲಿಯನ್ನು ದೆಹಲಿಗೆ ಆಮಂತ್ರಿಸಿ ಕಾರ್ಯಕ್ರಮ ನೀಡುವಂತೆ ಮನವಿ ಮಾಡಿದ್ದರು. ಏತನ್ಮಧ್ಯೆ, ನವೆಂಬರ್ 8 ಕ್ಕೆ ದೆಹಲಿಯಲ್ಲಿ ಮತ್ತು ಡಿಸೆಂಬರ್ 3ನೇ ತಾರೀಖಿಗೆ ಲಕ್ನೋದಲ್ಲಿ ಕಾರ್ಯಕ್ರಮ ನಡೆಸುವುದಾಗಿ ನಿಗದಿಯಾಗಿತ್ತು.
ಇದೀಗ ಭಾರತದಲ್ಲಿ ತನ್ನ ಕಾರ್ಯಕ್ರಮದ ಬಗ್ಗೆ ರಾಜಕೀಯ ಪಕ್ಷಗಳು ಹುಯಿಲೆಬ್ಬಿಸುವುದನ್ನು ನೋಡಿ ಬೇಸರಗೊಂಡ ಗುಲಾಂ ಅಲಿ ಇನ್ಮುಂದೆ ಭಾರತದಲ್ಲಿ ಕಾರ್ಯಕ್ರಮ ನಡೆಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.