ಸುಬ್ರಮಣಿಯನ್ ಸ್ವಾಮಿ- ಸುಪ್ರೀಂ ಕೋರ್ಟ್
ನವದೆಹಲಿ: ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿಯವರು 2006ರಲ್ಲಿ ಬರೆದ ``ಟೆರ ರಿಸಂ ಇನ್ ಇಂಡಿಯಾ''ಪುಸ್ತಕ ದೇಶದಲ್ಲಿ ಕೋಮು ದ್ವೇಷದ ವಾತಾವರಣ ಹರಡುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಅಫಿಡವಿಟ್ ಸಲ್ಲಿಸಿದೆ.
ಪುಸ್ತಕದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವ ವಾತಾವರಣ ಅಂಶವಿದೆ ಎಂದು ಗೃಹ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್ ಬಲವಾಗಿ ಪ್ರತಿಪಾದಿಸಿದೆ. ಅಸಹಿಷ್ಣುತೆ ವಿರುದ್ಧ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವಾಲಯ ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧದ ದಾಖಲಾಗಿರುವ ದ್ವೇಷ ಪೂರಿತ ಭಾಷಣ ಮಾಡಿದ್ದರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸುಪ್ರೀಂ ಕೋರ್ಟಲ್ಲಿ ಮಂಗಳವಾರ ಸಮರ್ಥಿಸಿ ಕೊಂಡಿದೆ.
ಯಾರೊಬ್ಬರಿಗೂ ಸಮುದಾಯಗಳ ನಡುವೆ ದ್ವೇಷಮಯ ವಾತಾವರಣ ಸೃಷ್ಟಿಸಲು ಅವಕಾಶ ಕೊಡುವುದಿಲ್ಲ. ಅಂಥ ಬೆಳವಣಿಗೆಗಳು ನಡೆದಲ್ಲಿ ಅಂಥವರ ವಿರುದ್ಧ ಕೇಸು ದಾಖಲಿಸುವುದಾಗಿ ತಿಳಿಸಿದೆ. ಬೆಳವಣಿಗೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಡಾ.ಸ್ವಾಮಿ, ``2006ರಲ್ಲಿ ಅಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ತೊಂದರೆ ಕೊಡದೇ ಇದ್ದ ಪುಸ್ತಕ 2015ರಲ್ಲಿ ಹೇಗೆ ತೊಂದರೆ ನೀಡಲು ಸಾಧ್ಯ? ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗಮನಕ್ಕೂ ಬಾರದೆ ಈ ವಿಚಾರ ಕೋರ್ಟ್‍ಗೆ ಸಲ್ಲಿಕೆಯಾಗಿದೆ. ಅವರ ಜತೆ ಈ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದ ಅಫಿಡವಿಟ್‍ಗೆ ಪ್ರತಿಯಾಗಿ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲಿದ್ದೇನೆ'' ಎಂದು ತಿಳಿಸಿದ್ದಾರೆ.