ದೇಶ

ಚಿಂತಕರ ಕೊಲೆಯನ್ನು ಸಮರ್ಥಿಸಲು ಸಾಧ್ಯವಿಲ್ಲ: ಮಾಜಿ ಪ್ರಧಾನಿ ಸಿಂಗ್

Sumana Upadhyaya

ನವದೆಹಲಿ: ದೇಶಾದ್ಯಂತ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಎದ್ದಿರುವ ಪ್ರತಿಭಟನೆಗೆ ದನಿಗೂಡಿಸಿರುವ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಇತ್ತೀಚಿನ ದಿನಗಳಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಯೋಚನೆಯ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ತುಳಿಯುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ಸ್ವಾತಂತ್ರ್ಯವಿಲ್ಲದೆ ಶಾಂತಿಯಿಲ್ಲ, ಶಾಂತಿಯಿಲ್ಲದೆ ಸ್ವಾತಂತ್ರ್ಯವಿಲ್ಲ' ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಚಿಂತಕರ ಮೇಲೆ ನಡೆಯುತ್ತಿರುವ ಅತಿರೇಕದ ದಾಳಿ ನಿಜಕ್ಕೂ ಬೇಸರ ಹುಟ್ಟಿಸುತ್ತದೆ ಎಂದು ಹೇಳಿದ್ದಾರೆ.
ಸದ್ವಿವೇಕದಿಂದ ಯೋಚಿಸುವವರು ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಖಂಡಿಸಿದ್ದಾರೆ. ಚಿಂತಕರ ಕೊಲೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅಂಥಹ ಕೃತ್ಯಗಳಿಗೆ ಅವಕಾಶವನ್ನೂ ನೀಡುವುದಿಲ್ಲ. ಸಾರ್ವಜನಿಕ ನೀತಿಗಳಿಗೆ ಧಾರ್ಮಿಕತೆ ಮೂಲ ಅಲ್ಲ, ಅದನ್ನು ಯಾರ ಮೇಲೂ ಹೇರಲೂ ಸಾಧ್ಯವಿಲ್ಲ. ವೈವಿಧ್ಯತೆಯಲ್ಲಿ ಏಕತೆ ಎಂದು ಸಾರುವ ನಮ್ಮ ದೇಶದಲ್ಲಿ ವೈವಿಧ್ಯತೆಯೇ ಸವಕಲಾದರೆ ದೇಶ ದುರ್ಬಲವಾಗುತ್ತದೆ. ದೇಶದ ಆರ್ಥಿಕ ಬೆಳವಣಿಗೆಗೆ ಶಾಂತಿ ಮುಖ್ಯ. ಭಾರತದ ಗಣರಾಜ್ಯದ ಮೌಲ್ಯಗಳಿಗೆ ಧಕ್ಕೆಯುಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಶೋಧನೆ, ಉದ್ಯಮಶೀಲತೆ ಮತ್ತು ಸ್ಪರ್ಧಾ ಮನೋಭಾವ ಮುಕ್ತ ಸಮಾಜದ ಒಂದು ಭಾಗವಾಗಿರುತ್ತದೆ. ಇಲ್ಲಿ ವ್ಯಕ್ತಿಗೆ ತಮ್ಮ ಯೋಚನೆಗಳನ್ನು ಮುಕ್ತವಾಗಿ ತಿಳಿಸಲು ಅವಕಾಶವಿದೆ. ಒಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ದೇಶದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ, ಉತ್ತರ ಪ್ರದೇಶದ ದಾದ್ರಿ ಪ್ರಕರಣ ಮತ್ತು ಹರ್ಯಾಣದಲ್ಲಿ ದಲಿತರ ಹತ್ಯೆ ಸಂಬಂಧ ದೇಶಾದ್ಯಂತ ತೀವ್ರ ಪ್ರತಿಭಟನೆ, ಚಳವಳಿ ಎದ್ದಿರುವ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.

SCROLL FOR NEXT